ಕೆ.ಕಣಬೂರು ಕಾಲನಿ ಸೇತುವೆ ದುರಸ್ತಿ ಪ್ರಾರಂಭ

ಎನ್.ಆರ್.ಪುರ ತಾಲೂಕಿನ ಕೆ.ಕಣಬೂರು ಕಾಲನಿ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸುತ್ತಿರುವುದು.
ಎನ್.ಆರ್.ಪುರ ತಾಲೂಕಿನ ಕೆ.ಕಣಬೂರು ಕಾಲನಿ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಸುತ್ತಿರುವುದು.
Published on
ನ್.ಆರ್.ಪುರ: ಕುಸಿಯುವ ಹಂತ ತಲುಪಿರುವ ಮುತ್ತಿನ ಗ್ರಾಪಂ ಕೆ.ಕಣಬೂರು ಕಾಲನಿ ಸೇತುವೆಯನ್ನು ಭದ್ರಾ ಮೇಲ್ದಂಡೆ ಯೋಜನೆಯ ಬಿಆರ್‌ಪಿ ಕಾರ್ಯಪಾಲಕ ಇಂಜಿನಿಯರ್ ಮಂಜುಳಾ ಹಾಗೂ ಅಧಿಕಾರಿಗಳ ತಂಡದವರು ಮಂಗಳವಾರ ವೀಕ್ಷಿಸಿದರು.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಆಗಮಿಸಿದ ಗ್ರಾಮಸ್ಥರು, ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಭದ್ರಾ ಮೇಲ್ದಂಡೆ ಯೋಜನೆ ಪ್ರಾರಂಭಿಸಿದ ನಂತರ ಸ್ಥಳೀಯ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಈ ಭಾಗದಲ್ಲಿ 100 ಇಂಚು ಮಳೆ ಆದರೂ ನಮಗೆ ಕುಡಿಯುವ ನೀರಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ದೊಡ್ಡ, ದೊಡ್ಡ ಕೆನಾಲ್ ತೆಗೆದಿರುವುದರಿಂದ ಕಾಲುವೆ ಪಕ್ಕದ ಬೋರ್‌ವೆಲ್‌ಗಳು ಬತ್ತಿಹೋಗಿವೆ. ಅಲ್ಲದೆ ಬಹಳಷ್ಟು ಮರಗಳು ನಾಶವಾಗಿವೆ. ಇದರಿಂದ ಜಮೀನು ಹಾಳಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಭಾರಿ ಮಳೆಯಾದರೂ ಸೇತುವೆಯ ಕೆಳಭಾಗದ ಕರಿಬಸವನ ಹಳ್ಳದಲ್ಲಿ ಬೇಸಿಗೆಯಲ್ಲಿ ನೀರು ಇರುವುದಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ದೊಡ್ಡ ವಾಹನಗಳು ಈ ಸೇತುವೆ ಮೇಲೆ ಓಡಾಡುವುದರಿಂದ ಸೇತುವೆ ಹಾಳಾಗಿದೆ. ಬದಲಿ ರಸ್ತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಭದ್ರಾ ಮೇಲ್ದಂಡೆ ಯೋಜನೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಸ್ಥಳೀಯರು ಏತ ನೀರಾವರಿ ಯೋಜನೆ ಮಾಡಿಕೊಡಿ ಎಂಬ ಬೇಡಿಕೆ ನೀಡಿದ್ದೇವೆ. ಆ ಬಗ್ಗೆ ಸಂಬಂಧಪಟ್ಟವರು ಭರವಸೆ ನೀಡಿದ್ದರು. ಆದರೆ ಮಾಡಿಕೊಡಲಿಲ್ಲ. ಕಳೆದ ವಷರ್ ಮತ್ತೆ ನಾವು 25 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಮಾಡಿಕೊಡಿ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳಿಗೆ ಮನವಿ ನೀಡಿದ್ದೇವೆ. ನಮ್ಮ ಅರ್ಜಿ ವಿಶ್ವೇಶ್ವರಯ್ಯ ನೀರಾವರಿ ನಿಗಮದಲ್ಲಿದೆ. ಅಲ್ಲದೆ ರಸ್ತೆಯೇ ಹಾಳಾಗಿ ಹೋಗುತ್ತಿದೆ. ಹೀಗಾಗಿ ಬದಲಿ ರಸ್ತೆ ಮಾಡಿಕೊಡಿ ಎಂದು ಆಗ್ರಹಿಸಿದರು.
ಮುತ್ತಿನಕೊಪ್ಪ ಗ್ರಾಪಂ ಮಾಜಿ ಸದಸ್ಯ ಸುಧಾಕರ, ಮುಖಂಡರಾದ ರವಿಕುಮಾರ್, ಬೆಳ್ಳಪ್ಪ, ಸತೀಶ್, ಹೂವಪ್ಪ, ಪ್ರಸನ್ನ, ನವೀನ್, ಭದ್ರಾ ಮೇಲ್ದಂಡೆ ಯೋಜನೆಯ ಮುತ್ತಿನಕೊಪ್ಪ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೌತಮ್ ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net