ಮಕ್ಕಳಿಗೆ ಅಂಚೆ ಪತ್ರ ಸಂಸ್ಕೃತಿಯ ಪರಿಚಯ

ಕಡೂರು ತಾಲೂಕಿನ ಎಮ್ಮೆದೊಡ್ಡಿ ಸರ್ಕಾರಿ ಪ್ರೌಢಾಶಾಲಾ ಮಕ್ಕಳು ಪತ್ರ-ಮಿತ್ರದ ಕಾರ್ಯಕ್ರಮದ ಮೂಲಕ ಅಂಚೆ ಪತ್ರವನ್ನು ಸಿದ್ಧಪಡಿಸಿದರು.
ಕಡೂರು ತಾಲೂಕಿನ ಎಮ್ಮೆದೊಡ್ಡಿ ಸರ್ಕಾರಿ ಪ್ರೌಢಾಶಾಲಾ ಮಕ್ಕಳು ಪತ್ರ-ಮಿತ್ರದ ಕಾರ್ಯಕ್ರಮದ ಮೂಲಕ ಅಂಚೆ ಪತ್ರವನ್ನು ಸಿದ್ಧಪಡಿಸಿದರು.
Published on
ಕಡೂರು: ಡಿಜಿಟಲ್ ಯುಗದಲ್ಲಿ ಮೊಬೈಲ್ ಸಂದೇಶಗಳ ನಡುವೆ ಕಳೆದುಹೋಗಿರುವ ಅಂಚೆ ಪತ್ರ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲು ಎಮ್ಮೆದೊಡ್ಡಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರು ಏರ್ಪಡಿಸಿದ್ದ ಪತ್ರ-ಮಿತ್ರ ಕಾರ್ಯಕ್ರಮದಲ್ಲಿ ಮಕ್ಕಳು ಕೈ ಬರವಣಿಗೆಯೊಂದಿಗೆ ಭಾವನೆಗಳನ್ನು ಹಂಚಿಕೊಂಡು ವಿಶೇಷ ಅನುಭವ ಪಡೆದರು. 
ತಂತ್ರಜ್ಞಾನದ ಅತಿ ಬಳಕೆಯಿಂದ ಇಂದಿನ ಮಕ್ಕಳಿಗೆ ಪತ್ರ ವಿನಿಮಯದ ಸುಂದರ ಅನುಭವ ಅಪರಿಚಿತವಾಗಿದೆ. ಮಕ್ಕಳಿಗೆ ಪತ್ರ ಬರೆಯುವ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಎಮ್ಮೆದೊಡ್ಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ಪಾಲಕರಿಗೆ ಪತ್ರ, ಗ್ರಾಪಂಗೆ ಪತ್ರ, ಸ್ನೇಹಿತರಿಗೆ ಪತ್ರ ಹೀಗೆ ಮೂರು ವಿಭಾಗದಲ್ಲಿ ಪತ್ರ ಬರೆಯಲು ವಿಶಿಷ್ಟ ಪ್ರಯತ್ನ ನಡೆಸಲಾಯಿತು. 
ಪತ್ರ-ಮಿತ್ರ ಕಾರ್ಯಕ್ರಮದ ಭಾಗವಾಗಿ ಶಾಲೆಯ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪೋಸ್ಟ್ ಕಾರ್ಡ್‌ಗಳಲ್ಲಿ ಮನದಾಳದ ಮಾತುಗಳನ್ನು ಬರೆದರು. ಪಾಲಕರು ಮತ್ತು ಗ್ರಾಪಂಗಳಿಗೆ ಪತ್ರ ಬರೆಯುವ ಮೂಲಕ ವಿಶಿಷ್ಟ ಅನುಭವ ತಮ್ಮದಾಗಿಸಿಕೊಂಡರು.  ಹಿಂದಿನ ಕಾಲದಲ್ಲಿ ಸಮಾಚಾರವನ್ನು ತಲುಪಿಸುವ ಮಾರ್ಗವಾಗಿದ್ದ ಪೋಸ್ಟ್ ಕಾರ್ಡ್ ಬರೆಯುವ ಅನುಭವವನ್ನು ವಿದ್ಯಾರ್ಥಿಗಳು ಪಡೆದುಕೊಂಡರು.
ಹಿಂದಿನ ಕಾಲದಲ್ಲಿ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿ ಪತ್ರದ ಮೂಲಕ ಹಂಚಿಕೊಳ್ಳುತ್ತಿದ್ದ ‘ಪತ್ರ-ಮಿತ್ರ’ ಪರಿಕಲ್ಪನೆಯನ್ನು ಮಕ್ಕಳು   ಸ್ವತಃ ಪತ್ರ ಬರೆಯುವ ಮೂಲಕ ಪ್ರಾಯೋಗಿಕವಾಗಿ ಅನುಭವಿಸಿದರು. ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನ, ಅಭಿವ್ಯಕ್ತಿ ಸಾಮರ್ಥ್ಯ ಹಾಗೂ ಸಮಾಜದೊಂದಿಗಿನ ಒಡನಾಟವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು. ಪತ್ರ ಬರೆಯುವ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ಕೆ ಶಾಲೆಯ ಶಿಕ್ಷಕ ಸಮೂಹ ಮೆಚ್ಚುಗೆ ವ್ಯಕ್ತಪಡಿಸಿದೆ. ಶಿಕ್ಷಕರಾದ ರಾಜಕುಮಾರ್, ಧನಂಜಯ್, ನಂಜುಂಡಪ್ಪ, ಸುರೇಶ್, ಆಶಾ, ಸ್ವಾಮಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net