ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಅವಮಾನ

ಬಿ.ಎಸ್.ಜಯರಾಮ್ ಅ
ಬಿ.ಎಸ್.ಜಯರಾಮ್ ಅ
Published on

ಪ್ರಮುಖ ಮುಖ್ಯಾಂಶಗಳು

  • ಸಂಪುಟದಲ್ಲಿ ಸಚಿವ ಸ್ಥಾನ
  • 2023ರ ಚುನಾವಣೆಯಲ್ಲಿ
ಮೂಡಿಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಚಿಕ್ಕಮಗಳೂರು ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ಕೊನೇ ಕ್ಷಣದಲ್ಲಿ ಕೈಬಿಟ್ಟು ಜಿಲ್ಲೆಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಜಯರಾಮ್ ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ. ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಒಬ್ಬರಿಗಾದರೂ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕಾಗಿತ್ತು. 20 ವರ್ಷಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರವಿಲ್ಲದೆ ವನವಾಸ ಅನುಭವಿಸಿದೆ. 2023ರ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷದ ಪರ ಹಗಲು-ರಾತ್ರಿಯೆನ್ನದೆ ಪ್ರಚಾರ ನಡೆಸಿ ಬಿಜೆಪಿ ಕೋಟೆಯನ್ನು ಛಿದ್ರ ಮಾಡಿದ್ದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ 5 ಸ್ಥಾನ ಗೆದ್ದಿತು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾಜಿ ಸಚಿವ ಬೇಗಾನೆ ರಾಮಯ್ಯ ಪುತ್ರಿ ಆರತಿ ಕೃಷ್ಣ ಮತ್ತು ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. 7 ಶಾಸನಸಭೆಯ ಸದಸ್ಯರನ್ನು ಬದಿಗಿಟ್ಟು ಸಚಿವ ಸಂಪುಟ ರಚಿಸಿರುವುದು ಜಿಲ್ಲೆಗೆ ಮಾಡಿರುವ ಅನ್ಯಾಯ. ಇಂಥ ಅನ್ಯಾಯ ಸಹಿಸಲಾಗದು. ಕೂಡಲೇ ಒಬ್ಬರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು. 
1978ರಲ್ಲಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆಯನ್ನು ಕಾಂಗ್ರೆಸ್ ನಾಯಕರು ಕಡೆಗಣಿಸಬಾರದು. ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹೆಸರನ್ನು ಸಚಿವರ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಸೇರ್ಪಡೆಗೊಳಿಸಿ ರಾಜ್ಯದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಬಳಿ ನೂತನ ಸಚಿವರ ಪಟ್ಟಿಯನ್ನು ಹೈಕಮಾಂಡ್ ಕಳಿಸಿಕೊಟ್ಟಿದೆ. ಗಾಯತ್ರಿ ಶಾಂತೇಗೌಡ ಅವರನ್ನು ಪ್ರಮಾಣವಚನ ಸ್ವೀಕರಿಸಲು ಲೋಕಭವನಕ್ಕೆ ತೆರಳುವಂತೆ ಅಧಿಕೃತ ಆಹ್ವಾನ ನೀಡಿದ್ದರಿಂದ ಅವರು ಪ್ರಮಾಣ ವಚನ ಸ್ವೀಕರಿಸಲು ಬೆಂಗಳೂರಿಗೆ ಬೆಂಬಲಿಗರೊಂದಿಗೆ ತೆರಳಿದ್ದರು. ಪ್ರಮಾಣವಚನ ಸ್ವೀಕಾರಕ್ಕೆ 2 ತಾಸು ಇದ್ದಾಗ ಅವರ ಹೆಸರನ್ನು ಕೈಬಿಡಲಾಗಿದೆ. ಇದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು. 
1999ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಮೋಟಮ್ಮ, ಡಿ.ಬಿ.ಚಂದ್ರೇಗೌಡ, ಸಿ.ಆರ್.ಸಗೀರ್ ಅಹಮದ್ ಸಚಿವರಾಗಿದ್ದರು. 2004ರ ನಂತರ ಬಂದ ಸರ್ಕಾರಗಳು ಜಿಲ್ಲೆಗೆ ಸಮರ್ಪಕವಾಗಿ ಪ್ರಾತಿನಿಧ್ಯ ನೀಡಿಲ್ಲ. ಹೊರಗಿನವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗುತ್ತಿದೆ. ಹಾಗೆ ನೇಮಕವಾದ ಸಚಿವರು ಜಿಲ್ಲೆಯ ಅನೇಕ ಸಮಸ್ಯೆಗಳು ಮತ್ತು ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ ಎಂದು ದೂರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net