ಪಂಚನಹಳ್ಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ನಿರಂಜನಪೀಠದ ಶ್ರೀ ಮಾಡಾಳು ರುದ್ರಮುನಿ ಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು, ಚನ್ನಬಸಪ್ಪ, ಮನೋಹರ್ ಮಠದ್, ಅಡಕೆ ಚಂದ್ರು, ಸಂತೋಷ್, ಪಿ.ಆರ್.ರಂಗನಾಥ್, ರಾಘವೇಂದ್ರ, ವಿಶಾಲಾಕ್ಷಮ್ಮ ಇದ್ದರು.
ಪಂಚನಹಳ್ಳಿ: ಮನೆ, ಸಮಾಜ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಕೈಜೋಡಿಸಬೇಕು ಎಂದು ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ತಿಳಿಸಿದರು.
ಪಂಚನಹಳ್ಳಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಮನುಷ್ಯ ತನ್ನ ಸ್ವಾರ್ಥಕ್ಕಾಗಿ ದೇಶ ಮತ್ತು ಧರ್ಮದ ವಿರುದ್ಧ ಕೂಗುತ್ತಿದ್ದಾನೆ. ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ದೇಶಾಭಿಮಾನ ಹೊಂದಿರಬೇಕು. ಶಾಲೆಯಲ್ಲಿ ಮಕ್ಕಳಿಗೂ ದೇಶ ಮತ್ತು ಭಾಷೆಯ ವಿಶೇಷತೆ ಬಗ್ಗೆ ಶಿಕ್ಷಣ ನೀಡಬೇಕು. ಸಣ್ಣ ಸಣ್ಣ ವಿಚಾರಗಳಿಗೂ ಕೈಜೋಡಿಸಿದಾಗ ಮಾತ್ರ ಶಕ್ತಿಶಾಲಿ ರಾಷ್ಟ್ರವಾಗಲು ಸಾಧ್ಯ. ಧರ್ಮ ಎಂದರೆ ಜೀವನ ಪದ್ಧತಿ. ಇಂತಹ ಪದ್ಧತಿಗಳಲ್ಲಿ ಸರಿಯಾದ ಕ್ರಮ ಮತ್ತು ಪಾವಿತ್ರೃ ರೂಪಿಸಿಕೊಂಡಲ್ಲಿ ಧರ್ಮವನ್ನು ಸಂರಕ್ಷಿಸಿದಂತೆ. ಸದಾಕಾಲ ಧರ್ಮದಿಂದ ನ್ಯಾಯಸಮ್ಮತವಾಗಿ ಜೀವನ ನಡೆಸಬೇಕು. ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯ ನಿಶ್ಚಿತ. ಮಕ್ಕಳಿಗೆ ಕಲಿಕೆಯ ಹಂತದಲ್ಲಿ ಧರ್ಮ, ದೇವಾಲಯಗಳ ಬಗ್ಗೆ ಶ್ರದ್ಧೆ ಮತ್ತು ಭಕ್ತಿಯನ್ನು ಬೆಳೆಸಬೇಕು. ಇದಕ್ಕೆ ಪೂರಕವಾದ ವಾತಾವರಣವನ್ನು ಪಾಲಕರು ಸೃಷ್ಟಿಸಬೇಕು. ಭಾರತ ಜಗತ್ತಿನ ಕಲ್ಯಾಣ ಬಯಸುವ ದೇಶವಾಗಿದೆ ಎಂದು ತಿಳಿಸಿದರು.
ನಿರಂಜನ ಪೀಠ ಶ್ರೀ ಮಾಡಾಳು ರುದ್ರಮುನಿ ಸ್ವಾಮೀಜಿ ಮಾತನಾಡಿ, ದೇಶದ ವ್ಯವಸ್ಥೆಯಲ್ಲಿ ಒಗ್ಗಟ್ಟು ಗಟ್ಟಿಯಾಗಿ ನಿಲ್ಲಬೇಕೆಂದರೆ ಮೊದಲು ಕುಟುಂಬ, ಗ್ರಾಮ ಒಗ್ಗಟ್ಟಾಗಿ ಇರಬೇಕು. ಪಾಲಕರು ಮಕ್ಕಳ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಕ್ಕಳ ವಿದ್ಯಾಭ್ಯಾಸದ ಜತೆಗೆ ಚಾರಿತ್ರ್ಯ, ಸಂಸ್ಕೃತಿ, ಸೌಜನ್ಯವನ್ನು ಕಲಿಸಿಕೊಡಬೇಕು. ಪ್ರಸ್ತುತ ಕೂಡು ಕುಟುಂಬದ ಪರಿಕಲ್ಪನೆ ದೂರವಾಗುತ್ತಿದ್ದು ಇದರಿಂದ ಮಕ್ಕಳ ಮೇಲೆ ಅನೇಕ ದುಷ್ಪರಿಣಾಮಗಳು ಬೀರುತ್ತಿವೆ. ಪಾಲಕರು ಮಕ್ಕಳ ಆಹಾರಕ್ರಮಗಳ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.
ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಅಡಕೆ ಚಂದ್ರು, ಗ್ರಾಪಂ ಅಧ್ಯಕ್ಷ ಪಿ.ಆರ್.ಸಂತೋಷ್, ಸದಸ್ಯರಾದ ಪಿ.ಆರ್.ರಂಗನಾಥ್, ಸಾವೆ ಮರಳಪ್ಪ, ಸ್ನೇಹ ವಿದ್ಯಾಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ, ವಿಶಾಲಾಕ್ಷಮ್ಮ, ಬಿಜೆಪಿ ಮಂಡಲ ಅಧ್ಯಕ್ಷ ಬಿ.ಪಿ.ದೇವಾನಂದ, ಜಯಸ್ವಾಮಿ ಇದ್ದರು.