ಎನ್.ಆರ್.ಪುರ: ಟೆಂಟಕಲ್ ಫೆನ್ಸಿಂಗ್ ಕಾಮಗಾರಿ ಕಳಪೆಯಾಗಿದ್ದು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಕಡಹಿನಬೈಲು ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಎನ್.ನಾಗರಾಜ್ ಆರೋಪಿಸಿದರು.
ಕಡಹಿನಬೈಲು ಗ್ರಾಪಂನಲ್ಲಿ ಏರ್ಪಡಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿ, ಕಾಡಾನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಒಂದೇ ಶಾಶ್ವತ ಪರಿಹಾರ. ರೈತರ ಬೆಳೆ ರಕ್ಷಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು. ಇತ್ತೀಚೆಗೆ ಈ ಭಾಗದ ರೈತರ ತೋಟಗಳಲ್ಲಿ ಮಂಗಗಳ ಹಾವಳಿ ಕೂಡ ಹೆಚ್ಚಾಗಿದೆ. ಇದರಿಂದ ಅಡಿಕೆ ತೋಟದ ಬೆಳೆ ನಾಶವಾಗುತ್ತಿದೆ. ಇದಕ್ಕೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಡಿಆರ್‌ಎ್ಒ ಕುಮಾರ್ ಮಾತನಾಡಿ, 10 ಕಿ.ಮೀ. ಟೆಂಟಕಲ್ ಫೆನ್ಸಿಂಗ್ ಮಾಡಲಾಗಿದೆ. ಕಾಮಗಾರಿ ಇನ್ನೂ ಮುಂದುವರಿಯಲಿದೆ. ಹಿರಿಯ ಅಧಿಕಾರಿಗಳು ಕಾಮಗಾರಿ ಗುಣಮಟ್ಟ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ನೇರ‌್ಲೆಕೊಪ್ಪ ಗ್ರಾಮದ ಡಿ.ಜಿ.ಜಗದೀಶ್, ಪರಮೇಶ್ವರ್ ಮಾತನಾಡಿ, ಕುಡಿಯುವ ನೀರಿನ ಯೋಜನೆಯ ಜೆಜೆಎಂ ಕಾಮಗಾರಿ ಕೈಗೊಂಡು 2 ವರ್ಷವಾದರೂ ಇನ್ನೂ ನೇರ‌್ಲೆಕೊಪ್ಪ ಗ್ರಾಮಕ್ಕೆ ನೀರು ಬಂದಿಲ್ಲ. ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗ್ರಾಮ ಲೆಕ್ಕಾಧಿಕಾರಿ ನಾಗಲಕ್ಷ್ಮೀ ಮಾತನಾಡಿ, ಕಡಹಿನಬೈಲು ಕಂದಾಯ ವೃತ್ತದಲ್ಲಿ ಎಸ್‌ಐಟಿ ಸರ್ವೇ ನಡೆಯುತ್ತಿದ್ದು, ನೇರ‌್ಲೆಕೊಪ್ಪ ಮತ್ತು ಕಡಹಿನಬೈಲು ಗ್ರಾಮಗಳು ಮಾತ್ರ ಬಾಕಿ ಉಳಿದಿವೆ ಎಂದು ತಿಳಿಸಿದರು. ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಎಸ್‌ಐಆರ್ ಸರ್ವೇ ನಡೆಸಿದ್ದು, ಈ ಹಿಂದೆ ಇದ್ದ 4 ಬೂತ್‌ಗಳ ಬದಲಿಗೆ 5 ಬೂತ್‌ಗಳನ್ನು ಮಾಡಲಾಗಿದೆ. 48 ಜನರು ಸಮರ್ಪಕ ಮಾಹಿತಿ ನೀಡಿಲ್ಲ. 135 ಜನರ ಪೈಕಿ ಕೆಲವರು ಮರಣ ಹೊಂದಿದ್ದು ಕೆಲವರು ವಿಳಾಸ ಬದಲಾಯಿಸಿದ್ದಾರೆ. ತಾಲೂಕಿನ 101 ಜನರ ಪಿಂಚಣಿ ಅನುಮಾನಾಸ್ಪದವಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬಿಸಿಎಂ ಇಲಾಖೆ ಅಧಿಕಾರಿ ಧರ್ಮರಾಜ್, ತೋಟಗಾರಿಕೆ ಇಲಾಖೆಯ ಪುನೀತ್, ಆಹಾರ ಇಲಾಖೆಯ ಗಣಪತಿ, ದರ್ಶನ್, ಮಂಜುನಾಥ್, ಶಂಕರ್, ಇಂಜಿನಿಯರ್ ರಶ್ಮಿ, ಮೆಸ್ಕಾಂ ಪವನ್, ಪಿಡಿಒ ವಿಂದ್ಯಾ ಮತ್ತಿತರರಿದ್ದರು.