ಜನ ಜಾಗೃತರಾಗದಿದ್ದರೆ ಉಳಿಯದು ಮಲೆನಾಡು

ಎನ್.ಆರ್.ಪುರಕ್ಕೆ ಆಗಮಿಸಿದ ಮಲೆನಾಡಿಗರ ಬದುಕು ಉಳಿಸಿ ಜನಜಾಗೃತಿ ಯಾತ್ರೆಯನ್ನು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ನಾಗೇಶ್ ಹಾಗೂ ಹಿರಿಯ ರೈತ ಮುಖಂಡರು  ಪುಷ್ಪಾರ್ಚನೆ ಮಾಡುವುದರ ಮೂಲಕ ಸ್ವಾಗತಿಸಿದರು. ದೇವಂತ್‌ರಾಜ್‌ಗೌಡ, ಅರುಣ್ ಕುಮಾರ್, ಬಿ.ಎಸ್.ಆಶೀಶ್‌ಕುಮಾರ್, ಮಂಜುನಾಥ್,ಎ.ಸಿ.ಶ್ರೀನಿವಾಸ್ ಇದ್ದರು.
ಎನ್.ಆರ್.ಪುರಕ್ಕೆ ಆಗಮಿಸಿದ ಮಲೆನಾಡಿಗರ ಬದುಕು ಉಳಿಸಿ ಜನಜಾಗೃತಿ ಯಾತ್ರೆಯನ್ನು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ನಾಗೇಶ್ ಹಾಗೂ ಹಿರಿಯ ರೈತ ಮುಖಂಡರು ಪುಷ್ಪಾರ್ಚನೆ ಮಾಡುವುದರ ಮೂಲಕ ಸ್ವಾಗತಿಸಿದರು. ದೇವಂತ್‌ರಾಜ್‌ಗೌಡ, ಅರುಣ್ ಕುಮಾರ್, ಬಿ.ಎಸ್.ಆಶೀಶ್‌ಕುಮಾರ್, ಮಂಜುನಾಥ್,ಎ.ಸಿ.ಶ್ರೀನಿವಾಸ್ ಇದ್ದರು.
Published on
ಎನ್.ಆರ್.ಪುರ: ಮಲೆನಾಡಿನ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಯಿಂದ ಹೊಸ ಕಾಯ್ದೆಗಳನ್ನು ಜಾರಿಗೆ ತರಲಾಗುತ್ತಿದ್ದು ಇದರ ವಿರುದ್ಧ ನಾಗರಿಕರು ಜಾಗೃತರಾಗದಿದ್ದರೆ ಮಲೆನಾಡು ಉಳಿಯುವುದಿಲ್ಲ ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್.ನಾಗೇಶ್ ಆತಂಕ ವ್ಯಕ್ತಪಡಿಸಿದರು.
ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಆಯೋಜಿಸಿರುವ ಮಲೆನಾಡಿಗರ ಬದುಕು ಉಳಿಸಿ ಜನಜಾಗೃತಿ ಯಾತ್ರೆ ಪಟ್ಟಣಕ್ಕೆ ಶನಿವಾರ ಆಗಮಿಸಿದಾಗ ವಲಯ ಅರಣ್ಯಾಧಿಕಾರಿ ಕಚೇರಿ ಮುಂಭಾಗ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಮಲೆನಾಡಿನಲ್ಲಿ ರೈತರ ಒತ್ತುವರಿ ತೆರವುಗೊಳಿಸಲು ಸರ್ಕಾರ ಎಸ್‌ಐಟಿ ರಚಿಸಿದ್ದು, ಒತ್ತುವರಿ ತೆರವುಗೊಂಡರೆ ರೈತರು, ವ್ಯಾಪಾರಸ್ಥರು, ಕಾರ್ಮಿಕರ ಬದುಕು ಉಳಿಯುವುದಿಲ್ಲ. ಸಾಗುವಳಿ ಮಾಡಿದ ಜಮೀನು ಉಳಿದರೆ ಮಾತ್ರ ರೈತರ ಬದುಕು ಉಳಿಯಲಿದೆ. ಇಲ್ಲವಾದಲ್ಲಿ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಲಿದೆ. ಭದ್ರಾ ಅಣೆಕಟ್ಟು ನಿರ್ಮಾಣದಿಂದ ಲವತ್ತಾದ ಜಮೀನು, ಬದುಕನ್ನು ಕಳೆದುಕೊಂಡ ತಾಲೂಕಿನ ಜನರ ಬದುಕು ಉತ್ತಮವಾಗಿ ರೂಪಿಸಿಕೊಳ್ಳಲು 50 ವರ್ಷಗಳೇ ಬೇಕಾಯಿತು ಎಂದರು.
 ಭದ್ರಾ ಅಣೆಕಟ್ಟು ನಿರ್ಮಾಣದಿಂದ ಜಮೀನು ಕಳೆದುಕೊಂಡ ತಾಲೂಕಿನ ಸಾರ್ಯ, ಚೆನ್ನಕೂಡಿಗೆ, ಹೆನ್ನಂಗಿ ಮತ್ತಿತರ ಗ್ರಾಮಗಳಲ್ಲಿ ನೆಲೆಕಂಡುಕೊಂಡಿರುವ ನಿರಾಶ್ರಿತರಿಗೆ ಇದುವರೆಗೂ ಪರಿಹಾರ ನೀಡಿಲ್ಲ. ತಾಲೂಕಿನ ಹೆಬ್ಬೆ ಅಭಯಾರಣ್ಯದಲ್ಲಿ ವಾಸವಾಗಿದ್ದ ಜನರನ್ನು ಸ್ಥಳಾಂತರಿಸಲಾಯಿತು. ಅಲ್ಲಿದ್ದ ದೊಡ್ಡ ಗಾತ್ರದ ಮರಗಳು ಅಭಯಾರಣ್ಯದಿಂದ ಕಾಣೆಯಾಗಿದ್ದು ಇವುಗಳನ್ನು ಲೂಟಿ ಮಾಡಿದ್ದು ಯಾರು? ಎಂದು ಅರಣ್ಯ ಇಲಾಖೆಯವರು ಉತ್ತರಿಸಲಿ ಎಂದರು.
 ಸೆಕ್ಷನ್ 4, ಸೆಕ್ಷನ್ 17, ದಟ್ಟಾರಣ್ಯ, ಮೀಸಲು ಅರಣ್ಯ ಎಂಬ ಹೆಸರಿನಲ್ಲಿ ರೈತರನ್ನು ಹೆದರಿಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿದೆ. ಪಟ್ಟಣದ ಚಿಕ್ಕಗ್ರಹಾರ ನಾಟ ಸಂಗ್ರಹಾಲಯದಲ್ಲಿರುವ ನಾಗಲಾಪುರ, ಬಾಳೆ ಗ್ರಾಪಂಗೆ ಸೇರಿದ 40 ಎಕರೆ ಗೋಮಾಳ ಜಾಗವನ್ನು ಸೆಕ್ಷನ್ 4 ಮಾಡಿದ್ದಾರೆ. ಭವಿಷ್ಯದಲ್ಲಿ ಜನಸಂಖ್ಯೆ ಹೆಚ್ಚಾದರೆ ಅವರಿಗೆ ವಸತಿ ನೀಡಲು ಜಾಗ ಇಲ್ಲವಾಗಿದೆ. ಇದರ ವಿರುದ್ಧ ಗ್ರಾಮ ಪಂಚಾಯಿತಿಯಿಂದ ಧ್ವನಿ ಎತ್ತಬೇಕಾಗಿದೆ. ಊರು ಉಳಿಯಬೇಕಾದರೆ ಎಲ್ಲರೂ ಒಟ್ಟಾಗಿ ಹೋರಾಡಬೇಕು. ರೈತರಿಲ್ಲದೆ ಯಾವ ಉದ್ಯಮವೂ ಉಳಿಯುವುದಿಲ್ಲ ಎಂದು ಹೇಳಿದರು.
ಸಮಿತಿ ಸದಸ್ಯ ಸಿ.ಎಲ್.ಮನೋಹರ್ ಮಾತನಾಡಿ, ಶಾಸಕಾಂಗಕ್ಕಿಂತ ಅರಣ್ಯ ಇಲಾಖೆ ದೊಡ್ಡದಲ್ಲ. ಅಧಿಕಾರದಲ್ಲಿರುವ ರಾಜಕೀಯ ಪಕ್ಷದವರು ರೈತರ ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ರೈತರಿಗೆ ಮರಣ ಶಾಸನ ಬರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಮಿತಿಯ ಕೂಸ್ಗಲ್ ಪುರುಷೋತ್ತಮ್, ಸಂದೇಶ್, ಸಚ್ಚಿನ್, ನವೀನ್, ರತ್ನಾಕರ್, ವಿವಿಧ ಸಂಘಟನೆಗಳ ಮುಖಂಡರಾದ ಅರುಣ್‌ಕುಮಾರ್, ಆಶೀಶ್‌ಕುಮಾರ್, ವೈ.ಎಸ್.ರವಿ. ಶ್ರೀನಾಥ್, ಎನ್.ಡಿ.ಪ್ರಸಾದ್, ಮಂಜುನಾಥ್, ವಾಲ್ಮೀಕಿ ಶ್ರೀನಿವಾಸ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net