ನಾವಿಂದು ಆತಂಕದ ನಡುವೆ ಬದುಕುತ್ತಿದ್ದೇವೆ. ಹಲವಾರು ಕಾನೂನುಗಳು ಜನಸಾಮಾನ್ಯರ ಹಾಗೂ ರೈತರ ಬದುಕನ್ನು ಕಸಿದುಕೊಂಡಿವೆ. ಭದ್ರಾ ಹಿನ್ನೀರಿಗೆ, ತುಂಗಾ ತಿರುವಿಗೆ ತಲೆತಲಾಂತರದ ಭೂಮಿಯನ್ನು ರೈತರು ಬಿಟ್ಟುಕೊಟ್ಟಿದ್ದಾರೆ. ಒಂದು ಕಡೆ ಅರಣ್ಯ ಇಲಾಖೆ ರೂಪಿಸಿರುವ ಕಾನೂನುಗಳು, ಮತ್ತೊಂದೆಡೆ ಕಾಡಾನೆಗಳ ಹಿಂಡು, ಕಾಡುಕೋಣ, ಚಿರತೆ ಮುಂತಾದ ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು ಏಳು ಜನರು ಆನೆಯ ದಾಂಧಲೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅಡಕೆ ಹಳದಿ ಎಲೆರೋಗ, ಎಲೆಚುಕ್ಕೆ ರೋಗದ ಜತೆಗೆ ಇತರ ಬೆಳೆಗಳ ಹಾನಿಗಳು ಕೃಷಿಕರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಲೂ ಸಾಧ್ಯವಾಗುತ್ತಿಲ್ಲ. ಕೆರೆಕಟ್ಟೆ ಭಾಗದಲ್ಲಿ ಪುರ್ನವಸತಿ ಯೋಜನೆಯ ಸಂತ್ರಸ್ತರಿಗೆ ತೊಂದರೆ ಆಗಿದೆ. ಕೃಷಿಯಿಂದ ಬದುಕು ನಿರ್ವಹಣೆ ಕಷ್ಟವಾಗುತ್ತಿದ್ದು ಯುವಪೀಳಿಗೆ ನಗರದತ್ತ ಮುಖಮಾಡಿದೆ. ಶೋಷಣೆಯ ವಿರುದ್ಧ ನಾವು ಧ್ವನಿ ಎತ್ತಬೇಕು. ಹೀಗಾಗಿ ಸಮಿತಿಯಿಂದ ಶೃಂಗೇರಿ ಕ್ಷೇತ್ರದ ಪ್ರತಿ ಗ್ರಾಪಂ ವ್ಯಾಪ್ತಿಗೂ ಜನಜಾಗೃತಿ ಯಾತ್ರೆ ತೆರಳಿದೆ ಎಂದರು.