ಕುಡಿಯುವ ನೀರಿನ ಬವಣೆ ನೀಗಿಸಿದ ಹದಮಳೆ

ತರೀಕೆರೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದುಗ್ಲಾಪುರ ಸಮೀಪದ ಮಾನಸಿಕೆರೆ.
ತರೀಕೆರೆ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದುಗ್ಲಾಪುರ ಸಮೀಪದ ಮಾನಸಿಕೆರೆ.
Published on
ತರೀಕೆರೆ: ಪಟ್ಟಣದ ಕೆಲ ಬಡಾವಣೆಗಳಲ್ಲಿ ಪ್ರಗತಿ ಹಂತದಲ್ಲಿರುವ ರಸ್ತೆ ನಿರ್ಮಾಣ ಕಾಮಗಾರಿಯಿಂದ ಕುಡಿಯುವ ನೀರಿನ ಕೃತಕ ಅಭಾವ ಸೃಷ್ಟಿಯಾಗಿದೆ. ಆದರೆ ಗ್ರಾಮೀಣ ಪ್ರದೇಶದ ಬಹುತೇಕ ಕಡೆ ಒಂದೆರಡು ಬಾರಿ ಸುರಿದ ಹದಮಳೆಯಿಂದ ಅಂತರ್ಜಲ ಮಟ್ಟ ಸುಧಾರಿಸಿ ಜನರಿಗೆ ಸಮೃದ್ಧ ನೀರು ಪೂರೈಕೆಯಾಗುತ್ತಿದೆ. 
ಬಿರುಬಿಸಿಲಿನ ತಾಪಕ್ಕೆ ಬಹುತೇಕ ಕೆರೆ, ಕಟ್ಟೆ, ಹಳ್ಳ, ಕೊಳ್ಳಗಳು ಬರಿದಾಗಿದೆಯಾದರೂ ಆಗಾಗ ಧರೆ ತಂಪುಗೊಳಿಸುತ್ತಿರುವ ವರುಣನ ಕೃಪೆಯಿಂದ ಅಂತರ್ಜಲ ಮಟ್ಟ ವೃದ್ಧಿಸಿ ಕುಡಿಯುವ ನೀರಿನ ಕೊರತೆ ಭಾಗಶಃ ನೀಗಿದೆ.
ಲಕ್ಕವಳ್ಳಿ, ಹಲಸೂರು, ಮಾಳಿಕೊಪ್ಪ, ಮಂಡರವಳ್ಳಿ, ಕೆಂಚಿಕೊಪ್ಪ, ಸೋಂಪುರ, ಕರಕುಚ್ಚಿ, ರಂಗೇನಹಳ್ಳಿ, ಬಾವಿಕೆರೆ, ಎಂ.ಸಿ.ಹಳ್ಳಿ ಗ್ರಾಮಗಳಿಗೆ ಭದ್ರಾ ಉಪ ನಾಲೆಯ ಜಲಮೂಲ ಆಸರೆಯಾದರೆ, ಎಚ್.ಮಲ್ಲೇನಹಳ್ಳಿ, ಅಮೃತಾಪುರ, ನಾಗೇನಹಳ್ಳಿ, ಮೇದಿಹಳ್ಳಿ, ಹುಣಸಘಟ್ಟ, ಹಾದಿಕೆರೆ ಮುಂತಾದ ಗ್ರಾಮಗಳಿಗೆ ಉಬ್ರಾಣಿ-ಅಮೃತಾಪುರ ಏತ ನೀರಾವರಿ ಯೋಜನೆ ನೀರು, ಉಡೇವಾ, ಬಳ್ಳಾವರ, ಕಲ್ಲತ್ತಿಪುರ, ಕೃಷ್ಣಾಪುರ ಇನ್ನಿತರ ಊರಿಗೆ ಕಲ್ಲತ್ತಿ ಜಲಪಾತದ ನೀರು, ಧೂಪದಖಾನ್, ತಿಮ್ಮನಬೈಲು, ರೋಪ್‌ಲೈನ್, ವರ್ತೆಗುಂಡಿ, ನಂದಿಬಟ್ಟಲು ಕಾಲನಿ, ತಣಿಗೇಬೈಲು, ನಂದಿ ಬಟ್ಟಲು ತಾಂಡಾಗಳಿಗೆ ಭೀಮನಹಳ್ಳ ಝರಿ ನೀರು ಆಧಾರವಾಗಿದೆ. ಇನ್ನು ಯರೇಹಳ್ಳಿ, ಇಟ್ಟಿಗೆ, ಲಕ್ಷ್ಮೀಸಾಗರ, ಲಕ್ಕೇನಹಳ್ಳಿ, ಪಿರಮೇನಹಳ್ಳಿ, ಬೇಲೇನಹಳ್ಳಿ, ಹುರುಳಿಹಳ್ಳಿ, ಬೆಟ್ಟದಹಳ್ಳಿ, ಕೋರನಹಳ್ಳಿ, ಚಟ್ಟನಹಳ್ಳಿ, ದೋರನಾಳು, ಸುಣ್ಣದಹಳ್ಳಿ, ಗುಳ್ಳದಮನೆ, ಕೆಂಚಾಪುರ, ಭೈರಾಪುರ ಮತ್ತಿತರ ಹತ್ತಾರು ಗ್ರಾಮಗಳ ಜನ ಕೊಳವೆ ಬಾವಿ ನೀರನ್ನೇ ಅವಲಂಬಿಸುವಂತಾಗಿದೆ.
ತಾಲೂಕು ಆಡಳಿತ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಹಲವು ಗ್ರಾಮಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಹಾಗಾಗಿ ಈವರೆಗೆ ಎಲ್ಲಿಂದಲೂ ಕುಡಿಯುವ ನೀರಿನ ಹಾಹಾಕಾರ ಕೇಳಿಬಂದಿಲ್ಲ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net