ಕೆಳಗೂರು ಗ್ರಾಮದ ದೇವೀರಮ್ಮ ದೇವಿಯ ಅಡ್ಡೆಯನ್ನು ಪೂಜಿಸಿರುವುದು.
Published on:
Copied
Follow Us
ಆಲ್ದೂರು: ಕೆಳಗೂರು ಗ್ರಾಮದ ದೇವೀರಮ್ಮ ದೇವಿಯ ಸುಗ್ಗಿಹಬ್ಬ ಶನಿವಾರ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.
21 ದಿನಗಳ ಕಾಲ ನಡೆಯುವ ಸುಗ್ಗಿಹಬ್ಬ ದೇವೀರಮ್ಮ ದೇವಿಯ ಹಬ್ಬವಾಗಿದೆ. 12 ಹಳ್ಳಿಗಳ ಜನ ಸುಗ್ಗಿಹಬ್ಬವನ್ನು ಆಚರಿಸುತ್ತಾರೆ. ಆರಂಭವಾದ ದಿನದಿಂದ ಗ್ರಾಮಸ್ಥರು ಮಾಂಸಾಹಾರ ತ್ಯಜಿಸಿ, ಮನೆಗಳನ್ನು ಸ್ವಚ್ಛಗೊಳಿಸಿ ಸಂಪ್ರದಾಯಗಳನ್ನು ಪಾಲಿಸುತ್ತಾರೆ.
ಹೊನ್ನಾರು ಉತ್ಸವ ಎಂಬ ವಿಶೇಷ ಆಚರಣೆ ನಡೆದ ನಂತರವೇ ಇಲ್ಲಿನ ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಮಲೆನಾಡು ಭಾಗದ ಬಹುತೇಕ ಗ್ರಾಮಗಳಲ್ಲಿ ಸುಗ್ಗಿಹಬ್ಬ ಆಚರಿಸಲಾಗುತ್ತದೆ. ಆದರೆ ಕೆಳಗೂರಿನ ಸುಗ್ಗಿಹಬ್ಬದ ವಿಶೇಷವೆಂದರೆ ರಥೋತ್ಸವ. ಕೆಳಗೂರು ಗ್ರಾಮದ ದೇವೀರಮ್ಮ ದೇವಿಯ ಸುಗ್ಗಿಹಬ್ಬದಲ್ಲಿ ಮಾತ್ರ ರಥೋತ್ಸವ ನಡೆಯುತ್ತದೆ. ದೇವಿರಮ್ಮ ದೇವಿಯ ಉತ್ಸವ ಮೂರ್ತಿಯನ್ನು ಮರದ ರಥದಲ್ಲಿ ಇರಿಸಿ ದೇವಸ್ಥಾನದ ಆವರಣದಲ್ಲಿ ರಥವನ್ನು ಎಳೆಯಲಾಗುತ್ತದೆ. ವಿಶೇಷ ಪೂಜೆಗಳು ಜರುಗುತ್ತವೆ.
ದೇವೀರಮ್ಮ, ಚಿಕ್ಕಮ್ಮ, ಗದ್ದಾಳಮ್ಮ ದೇವಿಯ ಮೂರ್ತಿಗಳನ್ನು ಅಡ್ಡೆಯಲ್ಲಿ ಕುಳ್ಳಿರಿಸಿ ದೇವರ ಅಡ್ಡೆಗಳನ್ನು ಭಕ್ತರು ಹೊತ್ತು ಕುಣಿಯುತ್ತಾರೆ. ಹಳ್ಳಿ ವಾದ್ಯಗಳ ನಾದಕ್ಕೆ ಭಕ್ತಿ ಭಾವದಿಂದ ದೇವರನ್ನು ಹೊತ್ತು ಹೆಜ್ಜೆ ಹಾಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
200 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕೆಳಗೂರು ಸುಗ್ಗಿ ಸಂಭ್ರಮ, ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರಲ್ಲದೆ ಹೊರ ಭಾಗಗಳಿಂದಲೂ ಭಕ್ತರು ಆಗಮಿಸುತ್ತಾರೆ. ಸುಗ್ಗಿ ಸಮಯದಲ್ಲಿ ಗ್ರಾಮದಲ್ಲಿ ಬೇರೆ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ. ರಥೋತ್ಸವ ನಡೆದು 6 ದಿನಗಳ ನಂತರ ತಿಂಗಳ ಪೂಜೆ ನಡೆಯುತ್ತದೆ. ನಂತರ ಗ್ರಾಮದಲ್ಲಿ ಶುಭ ಕಾರ್ಯಗಳನ್ನು ಮಾಡಬಹುದು. ವಂಶ ಪಾರಂಪರ್ಯವಾಗಿ ಬ್ರಾಹ್ಮಣ ಕುಟುಂಬದವರು ಇಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.