

ಕೊಪ್ಪ: ಎಲ್ಲರೂ ಒಬ್ಬರಿಗಾಗಿ, ಒಬ್ಬರು ಎಲ್ಲರಿಗಾಗಿ ಎಂಬುದು ಸಹಕಾರ ಕ್ಷೇತ್ರದ ಮೂಲ ತತ್ವ. 1949ರಲ್ಲಿ ನಮ್ಮೂರಿನ ಹಿರಿಯ ಚೇತನರು ಬಿತ್ತಿದ ಸಹಕಾರದ ಬೀಜ ಇಂದು ಹೆಮ್ಮರವಾಗಿ ಬೆಳೆದು ಸಾವಿರಾರು ಕುಟುಂಬಗಳಿಗೆ ಆಶ್ರಯ ಮತ್ತು ಆಸರೆಯಾಗಿದೆ ಎಂದು ಹರಿಹರಪುರದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಹರಿಹರಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಮೊದಲ ಮಹಡಿ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಜೇಮಿಟ್ಟಿಗೆ ವಿಷ್ಣುಮೂರ್ತಿ ಭಟ್ ಹಾಗೂ ಮಲ್ಲೇಶಯ್ಯ ಛತ್ರದ ನರಸಿಂಹಯ್ಯ ಸೇರಿದಂತೆ ಹಿರಿಯರ ಆಶೀರ್ವಾದ ಮತ್ತು ಮಾರ್ಗದರ್ಶನದಿಂದ ಸಹಕಾರ ಚಳವಳಿಗೆ ಭದ್ರ ಬುನಾದಿ ದೊರಕಿದೆ. ರಾಷ್ಟ್ರೀಯ ನಾಯಕರು ದೇಶದ ಒಳಿತಿಗಾಗಿ ಕರೆ ನೀಡಿದಾಗ ಅದನ್ನು ತಕ್ಷಣ ಕಾರ್ಯರೂಪಕ್ಕೆ ತರುವ ಜನಪರ ಮನೋಭಾವ ಇಲ್ಲಿನ ಜನರಲ್ಲಿದೆ. 1951ರಲ್ಲಿ ವಿನೋಬಾ ಭಾವೆ ಅವರು ಆರಂಭಿಸಿದ ಭೂ ದಾನ ಚಳವಳಿ ಹರಿಹರಪುರದಲ್ಲಿ ಕೇವಲ ಒಂದು ವಾರದೊಳಗೆ ಅನುಷ್ಠಾನಗೊಂಡಿರುವುದು ಇಲ್ಲಿನ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ ಎಂದರು.
ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಸಂಘ ಇಂದು ಅನೇಕ ಜನಪರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನರ ವಿಶ್ವಾಸಗಳಿಸಿದೆ. ಸಹಕಾರ ವ್ಯವಸ್ಥೆಯಲ್ಲಿ ಜನರ ದುಡಿಮೆಯ ಹಣವನ್ನು ಅದೇ ಊರಿನ ಅಭಿವೃದ್ಧಿಗೆ ವಿನಿಯೋಗಿಸಿದಾಗ ಸಮಗ್ರ ಅಭಿವೃದ್ಧಿ ಸಾಧ್ಯ. ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸೇವಾ ಮನೋಭಾವ ಶ್ಲಾಘನೀಯ. ಶ್ರೀಮಠದ ಆಶೀರ್ವಾದ ಸದಾ ಸಂಘದ ಮೇಲಿರುತ್ತದೆ ಎಂದು ತಿಳಿಸಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸಿನಲ್ಲಿ ಸಹಕಾರ ಕ್ಷೇತ್ರಕ್ಕೆ ಮಹತ್ವದ ಸ್ಥಾನವಿದೆ. ಬಡ್ಡಿದಾರರ ಕಪಿಮುಷ್ಟಿಯಿಂದ ರೈತರನ್ನು ಮುಕ್ತಗೊಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರ ಚಳವಳಿ ನೆರವಾಗಿದೆ. ಪಂಡಿತ್ ಜವಾಹರಲಾಲ್ ನೆಹರು ಅವರು ಸಹಕಾರ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹ ನೀಡಿದ್ದರು. ಸಹಕಾರ ಸಂಘಗಳ ಸಾಲ ಸೌಲಭ್ಯಗಳಿಂದ ರೈತರು ತಮ್ಮ ಜಮೀನುಗಳನ್ನು ಉಳಿಸಿಕೊಂಡು ಕೃಷಿ ಮುಂದುವರಿಸಲು ಸಾಧ್ಯವಾಯಿತು ಎಂದರು.
ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಹರಿಹರಪುರ ಕೃಷಿ ಪತ್ತಿನ ಸಹಕಾರ ಸಂಘವು ಪ್ರತಿ ವರ್ಷ ಲಾಭದೊಂದಿಗೆ ಮುನ್ನಡೆಯುತ್ತಿರುವುದು ಸಂತೋಷದ ಸಂಗತಿ. ರೈತರಿಗೆ ನಿರಂತರವಾಗಿ ಸಾಲ ಸೌಲಭ್ಯ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೆರವು ನೀಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ. ರೈತರ ವಿಶ್ವಾಸಗಳಿಸಿರುವ ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
ಸಂಘದ ಅಧ್ಯಕ್ಷ ಎಚ್.ಎಸ್. ಪ್ರವೀಣ್ ಕುಮಾರ್ ಮಾತನಾಡಿ, ಈ ವರ್ಷ ಸಂಘದ ಸ್ವಂತ ನಿಧಿಯಿಂದ ಸುಮಾರು 13 ಸದಸ್ಯರಿಗೆ ಬೆಳೆ ಸಾಲ ನೀಡಲಾಗಿದೆ. ಸಾಲ ಮರುಪಾವತಿ ಉತ್ತಮವಾಗಿ ನಡೆದರೆ ಮುಂದಿನ ವರ್ಷ ಹೆಚ್ಚುವರಿಯಾಗಿ 20 ಮಂದಿಗೆ ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ. ಇಂದಿನ ಕಾರ್ಯಕ್ರಮಕ್ಕೆ ಸಂಘದ ಹಣ ಬಳಸದೆ ದಾನಿಗಳ ನೆರವಿನಿಂದ ಅನಗತ್ಯ ವೆಚ್ಚವಿಲ್ಲದೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಉದ್ಘಾಟನೆಗೊಂಡ ಕಟ್ಟಡದ ಮೇಲ್ಭಾಗದಲ್ಲಿ ಬಾಡಿಗೆ ಉದ್ದೇಶಕ್ಕಾಗಿ ಹೆಚ್ಚುವರಿ ಸೌಲಭ್ಯಗಳನ್ನು ನಿರ್ಮಿಸುವ ಯೋಜನೆಯಿದ್ದು, ಇದರಿಂದ ಬರುವ ಆದಾಯವನ್ನು ಸಿಬ್ಬಂದಿ ವೇತನ ಹಾಗೂ ಸಂಘದ ನಿರ್ವಹಣಾ ವೆಚ್ಚಗಳಿಗೆ ಬಳಸಿಕೊಳ್ಳಲಾಗುವುದು. ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಿ ನಷ್ಟವಿಲ್ಲದೆ ಮುನ್ನಡೆಸುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಎಸ್.ಸತೀಶ್, ಎಚ್.ಕೆ. ಓರಶಾಂತ್, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ, ಉಪಾಧ್ಯಕ್ಷ ಮನ್ಸೂರ್ ಅಲಿ, ನಿರ್ದೇಶಕರಾದ ಆನಂದ್ ಜಿ. ಶೆಟ್ಟಿ, ಈಶ್ವರ ಗೌಡ, ಮೊಹಮ್ಮದ್ ಶರೀಫ್, ರಮ್ಯಾ ರವಿರಾಜ್, ಶ್ರೀಲತಾ ಸುಧಾಕರ, ಕೃಷ್ಣ ಪ್ರಸಾದ್, ಬಾಲಕೃಷ್ಣ, ದೀಪಕ್, ಶ್ರೀಹರ್ಷ ಹಾಗೂ ಸಂತೋಷ್ ಉಪಸ್ಥಿತರಿದ್ದರು.
ಸಂಘದ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಸದಸ್ಯರು, ಷೇರುದಾರರು ಹಾಗೂ ಸಿಬ್ಬಂದಿ ಸಹಕಾರ ಮಹತ್ವವಾಗಿದೆ. ಸಂಘದಲ್ಲಿ ಸಾಲ ಪಡೆದ ಸದಸ್ಯರಿಂದ ಶೇ.100 ರಷ್ಟು ಸಾಲ ಮರುಪಾವತಿಯಾಗಿದೆ. ಈವರೆಗೆ ಯಾವುದೇ ಸಾಲದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿಲ್ಲ ಎಂಬುದು ಹೆಮ್ಮೆಯ ಸಂಗತಿ. ಇದು ಸದಸ್ಯರ ವಿಶ್ವಾಸ ಮತ್ತು ಉತ್ತಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.
ಎಚ್.ಎಸ್.ಪ್ರವೀಣ್ ಕುಮಾರ್ ಸಂಘದ ಅಧ್ಯಕ್ಷ
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಸಹಕಾರ ಸಂಘಗಳ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿತ್ತು. ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ ಸಂಘಗಳು ಮತ್ತಷ್ಟು ಬಲಿಷ್ಠವಾಗುತ್ತವೆ. ಕಾಂಗ್ರೆಸ್ ಸರ್ಕಾರದ ಶೂನ್ಯ ಬಡ್ಡಿದರದ ಕೃಷಿ ಸಾಲ ಯೋಜನೆ ರೈತರಿಗೆ ಅನುಕೂಲವಾಗಿದೆ. ಮಲೆನಾಡ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು.
ಟಿ.ಡಿ.ರಾಜೇಗೌಡ ಶಾಸಕ