ಮಕ್ಕಳ ಸ್ವಾಗತಿಸಲು ಸರ್ಕಾರಿ ಶಾಲೆಗಳು ಸಜ್ಜು

 ಮೂರು ವರ್ಷದಿಂದ ಮುಚ್ಚಿದ್ದ ಹುಲಿಗೊಂದಿ ಗ್ರಾಮದ ಸರ್ಕಾರಿ ಶಾಲೆಯನ್ನು ಪುನಃ ಆರಂಭಿಸಲು ಸುಣ್ಣಬಣ್ಣ ಬಳಿದು ಸಜ್ಜುಗೊಳಿಸಿರುವುದು.
ಮೂರು ವರ್ಷದಿಂದ ಮುಚ್ಚಿದ್ದ ಹುಲಿಗೊಂದಿ ಗ್ರಾಮದ ಸರ್ಕಾರಿ ಶಾಲೆಯನ್ನು ಪುನಃ ಆರಂಭಿಸಲು ಸುಣ್ಣಬಣ್ಣ ಬಳಿದು ಸಜ್ಜುಗೊಳಿಸಿರುವುದು.
Published on
ಕಡೂರು: ಬೇಸಿಗೆ ರಜೆ ಪೂರ್ಣಗೊಳಿಸಿ ಶಾಲೆಗಳತ್ತ ಹೆಜ್ಜೆ ಹಾಕುವ ಮಕ್ಕಳನ್ನು ಸ್ವಾಗತಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಜಿಲ್ಲೆಯ ಶೈಕ್ಷಣಿಕ ವಲಯಗಳ ಸರ್ಕಾರಿ ಶಾಲೆಗಳು ಸಜ್ಜಾಗಿದ್ದು ಹಬ್ಬದ ಸಂಭ್ರಮ ಮನೆ ಮಾಡಿದೆ.
 ಶಾಲೆಗಳಲ್ಲಿ ಸ್ವಚ್ಛತೆ ಸೇರಿದಂತೆ ಮಕ್ಕಳ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯಲ್ಲಿ ವಾರದ ಮುಂಚೆಯೇ ಖಾಸಗಿ ಹಾಗೂ ಕೆಲವು ಅನುದಾನಿತ ಶಾಲೆಗಳು ಆರಂಭಗೊಂಡಿವೆ. ಜೂ.1ರಂದು ಸರ್ಕಾರಿ ಶಾಲಾ ಪ್ರಾರಂಭೋತ್ಸವಗೊಳ್ಳಲಿದೆ. ಶಾಲೆ ಆರಂಭದ ದಿನ ಮಕ್ಕಳಿಗೆ ಸಿಹಿ ತಿಂಡಿ ನೀಡುವ ಮೂಲಕ ಸ್ವಾಗತಿಸಲಾಗುತ್ತದೆ. ಜೂ.1ರಂದು ಶಾಲಾ ಪ್ರಾರಂಭೋತ್ಸವದ ಜತೆಗೆ ಪಾಲಕರ ಸಭೆಯೂ ನಡೆಯಲಿದೆ.
ಪೂರ್ವ ಪ್ರಾಥಮಿಕದಿಂದ ಪಿಯುಸಿವರೆಗೂ ಒಂದೇ ಕ್ಯಾಂಪಸ್‌ನಲ್ಲಿ ದ್ವಿಭಾಷಾ ಶಿಕ್ಷಣ ಕಲ್ಪಿಸಿಕೊಡುವ ಆಶಯದೊಂದಿಗೆ ರಾಜ್ಯ ಸರ್ಕಾರ ತೆರೆದಿರುವ ಕರ್ನಾಟಕ ಪಬ್ಲಿಕ್ ಶಾಲೆಗಳು(ಕೆಪಿಎಸ್) ಜಿಲ್ಲೆಯ ಹೊಸದಾಗಿ ಮಂಜೂರಾದ 16 ಶಾಲೆಗಳನ್ನು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳೊಂದಿಗೆ ವಿಲೀನಗೊಳಿಸಿ ಶಾಲೆಯ ಕೊಠಡಿಗಳು, ಆಟದ ಮೈದಾನ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕೆಪಿಎಸ್ ಆಗಿಸಲು ತಲಾ 4 ಕೋಟಿ ರೂ. ಅಂದಾಜು ಮೊತ್ತದ ಕ್ರಿಯಾಯೋಜನೆಗಳನ್ನು ಸಿದ್ಧಗೊಳಿಸಿ ಕಾರ್ಯಾರಂಭಕ್ಕೆ ಸಿದ್ಧಗೊಂಡಿದೆ. 
ಬಹುತೇಕ ಅನುದಾನಿತ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಕೊರತೆ ಕಾಡುತ್ತಿದೆ. ಸರ್ಕಾರ ಐದು ವರ್ಷದಿಂದ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇರ ನೇಮಕಾತಿ ಪ್ರಕ್ರಿಯೆ ನಡೆಸದ ಪರಿಣಾಮ ಶಾಲೆಯ ಆಡಳಿತ ಮಂಡಳಿಯು ಇರುವ ವ್ಯವಸ್ಥೆಯೊಂದಿಗೆ ಅತಿಥಿ ಶಿಕ್ಷಕರನ್ನೇ ಅವಲಂಬಿಸಿದ್ದು ಕೆಲವೆಡೆ ಶಾಲೆಗಳಲ್ಲಿ ಮಕ್ಕಳ ಪಾಠ ಬೋಧನೆಗೆ ಅತಿಥಿ ಶಿಕ್ಷಕರೇ ಶಾಲೆಯ ಬೆಳವಣಿಗೆಗೆ ಬೆನ್ನ್ನೆಲುಬಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net