245 ಕೆರೆಗಳಿಗೆ ಮೊದಲ ಹಂತದ ನೀರು

ಲಿಂಗದಹಳ್ಳಿ, ಪಿಳ್ಳೆಯ್ಯನ ಕೆರೆಗೆ ಭದ್ರಾ ಉಪಕಣಿವೆ ಯೋಜನೆ ಮೂಲಕ ಮೊದಲ ಹಂತದ ನೀರು ಹರಿಸಿದ ಸಂದರ್ಭದಲ್ಲಿ ಲಿಂಗದಹಳ್ಳಿ ಗ್ರಾಮಸ್ಥರು ಶಾಸಕ ಜಿ.ಎಚ್.ಶ್ರೀನಿವಾಸ್ ಅವರನ್ನು ಸನ್ಮಾನಿಸಿದರು. ಲಿಂಗರಾಜು, ಎಸ್.ಎ.ಕೃಷ್ಣಪ್ಪ, ಎಲ್.ಎಂ.ಶ್ರೀನಿವಾಸ್ ಇತರರಿದ್ದರು.
ಲಿಂಗದಹಳ್ಳಿ, ಪಿಳ್ಳೆಯ್ಯನ ಕೆರೆಗೆ ಭದ್ರಾ ಉಪಕಣಿವೆ ಯೋಜನೆ ಮೂಲಕ ಮೊದಲ ಹಂತದ ನೀರು ಹರಿಸಿದ ಸಂದರ್ಭದಲ್ಲಿ ಲಿಂಗದಹಳ್ಳಿ ಗ್ರಾಮಸ್ಥರು ಶಾಸಕ ಜಿ.ಎಚ್.ಶ್ರೀನಿವಾಸ್ ಅವರನ್ನು ಸನ್ಮಾನಿಸಿದರು. ಲಿಂಗರಾಜು, ಎಸ್.ಎ.ಕೃಷ್ಣಪ್ಪ, ಎಲ್.ಎಂ.ಶ್ರೀನಿವಾಸ್ ಇತರರಿದ್ದರು.
Published on
ಲಿಂಗದಹಳ್ಳಿ: ತರೀಕೆರೆ, ಕಡೂರು ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ 245 ಕೆರೆಗಳಿಗೆ ಭದ್ರಾ ಉಪ ಕಣಿವೆ ಯೋಜನೆ ಮೂಲಕ ನೀರನ್ನು ತುಂಬಿಸುವ 1281.80 ಕೋಟಿ ರೂ.ವೆಚ್ಚದ ಯೋಜನಾ ವರದಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ನಾಲ್ಕು ಹಂತಗಳಲ್ಲಿ ಯೋಜನೆ ಕೈಗೊಳ್ಳಲು ಅನುಮೋದನೆ ನೀಡಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು. 
ಲಿಂಗದಹಳ್ಳಿ ಹೋಬಳಿಯ ಲಿಂಗದಹಳ್ಳಿ ಕೆರೆ, ಉಡೇವಾ ಕೆರೆ, ಗೊಣಗಿಲ ಕಟ್ಟೆ ಕೆರೆ, ಬಳ್ಳಾವರ ಕೆರೆ, ಗುಳ್ಳದ ಮನೆ, ನಂದಿ, ದೋರನಾಳು ಕೆರೆ ಸೇರಿದಂತೆ ಒಟ್ಟು 50 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸುವ ಸಂದರ್ಭದಲ್ಲಿ ಗಂಗಾಪೂಜೆ ನೇರವೇರಿಸಿ ಮಾತನಾಡಿದರು.
ಈ ಯೋಜನೆಯ ಪ್ರಥಮ ಹಂತದಲ್ಲಿ ತರೀಕೆರೆ ತಾಲೂಕಿನ 50 ಕೆರೆ ಮತ್ತು ಕಡೂರು ತಾಲೂಕಿನ 4 ಕೆರೆ ಸೇರಿದಂತೆ ಒಟ್ಟು 54 ಕೆರೆಗಳಿಗೆ ನೀರು ತುಂಬಿಸುವ 406.50 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಯನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿ ಕನ್‌ಸ್ಟ್ರಕ್ಷನ್ ಕಂಪನಿಗೆ ವಹಿಸಿಕೊಡಲಾಗಿದೆ. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿರುವುದರಿಂದ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಗಂಗಾಪೂಜೆ ಮೂಲಕ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು. 
400 ಕೋಟಿ ರೂ. ಅನುದಾನದಲ್ಲಿ 78 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಯೋಜನೆಯ 3ನೇ ಹಂತ 407.50  ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ವಹಿಸಲಾಗುತ್ತಿರುವ ಈ ಯೋಜನೆಯಿಂದ ತುಂಬಲಿರುವ ಅನೇಕ ಕೆರೆಗಳು ಸತತ ಬರಗಾಲದ ವ್ಯಾಪ್ತಿಗಳಲ್ಲಿವೆ. ಕೆರೆಗಳಿಗೆ ಆದ್ಯತೆ ಮೇಲೆ ನೀರನ್ನು ತುಂಬಿಸಿ ಜನ, ಜಾನುವಾರುಗಳಿಗೆ ಉಂಟಾಗಿರುವ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಮತ್ತು ಅಂತರ್ಜಲ ಮಟ್ಟ ವೃದ್ಧಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಶೀಘ್ರ ಎಲ್ಲ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದರು. 
ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ ಮಾತನಾಡಿ, ಜಿ.ಎಚ್.ಶ್ರೀನಿವಾಸ್ ಶಾಸಕರಾಗಿದ್ದ ಸಂದರ್ಭದಲ್ಲಿ ಲಿಂಗದಹಳ್ಳಿ ಹೋಬಳಿಗೆ ಹೆಬ್ಬೆ ಜಲಪಾತದಿಂದ ನೀರನ್ನು ಒದಗಿಸುವಂತೆ ಮನವಿ ಮಾಡಲಾಗಿತ್ತು. ಶಾಸಕರು ನಮ್ಮ ಮನವಿಗೆ ಸ್ಪಂದಿಸಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಿದಾಗ ಹೆಬ್ಬೆ ಜಲಪಾತ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿದರಿಂದ ಆ ಯೋಜನೆ ಮಾಡಲು ಸಾಧ್ಯವಾಗದ ಕಾರಣ ಹೆಬ್ಬೆ ನೀರು ಮುಂದೆ ಸಾಗಿ ಭದ್ರಾ ಜಲಾಶಯಕ್ಕೆ ಸೇರುತ್ತಿರುವುದರಿಂದ ಭದ್ರಾ ಜಲಾಶಯದಿಂದಲೇ ನೀರು ಪೂರೈಸುವುದಾಗಿ ನೀಡಿದ ಭರವಸೆಯಂತೆ ಇಂದು ಭದ್ರಾ ಉಪಕಣಿವೆ ಯೋಜನೆ ಮೂಲಕ ಸಂಪೂರ್ಣ ತರೀಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶೇ.90ರಷ್ಟು ಕೆರೆಗಳಿಗೆ ನೀರು ಹರಿಸಿದ್ದಾರೆ ಎಂದು ಹೇಳಿದರು. 
ಲಿಂಗದಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಲಿಂಗರಾಜು, ಮುಖಂಡರಾದ ಎಸ್.ಎ.ಕೃಷ್ಣಪ್ಪ , ಎಲ್.ಎಂ.ಶ್ರೀನಿವಾಸ್, ಗುಳ್ಳದಮನೆ ಗೋಪಾಲಕೃಷ್ಣ, ಜನಾದರ್ನ್ ಗೌಡ, ಬಿ.ಆರ್.ರವಿ, ಇಂಜಿನಿಯರ್‌ಗಳು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net