ರೈತರ ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತ ( Farmers )

ಎನ್.ಆರ್.ಪುರ ತಾಲೂಕು ಹೊನ್ನೇಕುಡಿಗೆ ಗ್ರಾಪಂ ರೈತರು ಹಾಗೂ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಎನ್.ಆರ್.ಪುರ ತಾಲೂಕು ಹೊನ್ನೇಕುಡಿಗೆ ಗ್ರಾಪಂ ರೈತರು ಹಾಗೂ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
Published on
ಎನ್.ಆರ್.ಪುರ: ಹೊನ್ನೇಕೊಡಿಗೆ ಗ್ರಾಪಂಯಲ್ಲಿ ಸೋಮವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಮಂಗಳವಾರವೂ ಮುಂದುವರಿಸಿ ಸಂಜೆ ಹೊತ್ತಿಗೆ ಅಧಿಕಾರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಟ್ಟರು.
ಅರಣ್ಯಹಕ್ಕು ಸಮಿತಿಗೆ ಮಾಹಿತಿ ನೀಡದೆ ಅಧಿಕಾರಿಗಳೇ ರೈತರ ಅರ್ಜಿಗಳನ್ನು ವಜಾ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಹೊನ್ನೇಕೊಡಿಗೆ ಅರಣ್ಯ ಹಕ್ಕು ಸಮಿತಿ ಸದಸ್ಯರು, ಫಲಾನುಭವಿಗಳು, ಗ್ರಾಮಸ್ಥರು ಸೋಮವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಸೋಮವಾರ ರಾತ್ರಿಯವರೆಗೂ ಸಮಸ್ಯೆ ಬಗೆಹರಿದಿರಲಿಲ್ಲ. ಮಂಗಳವಾರ ಮತ್ತೆ ಗ್ರಾಮ ಪಂಚಾಯಿತಿಗೆ ದೌಡಾಯಿಸಿದ ರೈತರು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. 
ಮಧ್ಯಾಹ್ನದ ಹೊತ್ತಿಗೆ ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎ.ಕೆ.ಪಾಟೀಲ್, ತಾಪಂ ಸಹಾಯಕ ನಿರ್ದೇಶಕಿ ಮಂಜುಳಾ ಆಗಮಿಸಿ ರೈತರೊಂದಿಗೆ ಚರ್ಚೆ ನಡೆಸಿದರು. ಸಮಸ್ಯೆ ಬಗೆಹರಿಸಲು ಶೀಘ್ರ ವಿಶೇಷ ಗ್ರಾಮ ಸಭೆ ಕರೆಯುತ್ತೇವೆ ಎಂದು ಭರವಸೆ ನೀಡಿದರು.
ಹೊನ್ನೇಕೊಡಿಗೆ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಕೆ.ಟಿ.ರಘು, ಗ್ರಾಪಂ ಮಾಜಿ ಸದಸ್ಯ ಹಂಚಿನಮನೆ ರಾಘವೇಂದ್ರ, ಪಿಸಿಎಆರ್‌ಡಿ ಬ್ಯಾಂಕ್ ನಿರ್ದೇಶಕ ದೇವಂತರಾಜ್ ಮತ್ತಿತರರು ಮಾತನಾಡಿ, ಹೊನ್ನೇಕೊಡಿಗೆ ಗ್ರಾಪಂಯಲ್ಲಿ ಅರಣ್ಯ ಹಕ್ಕು ಸಮಿತಿಯಿಂದ 143 ರೈತರು ಅರ್ಜಿ ಸಲ್ಲಿಸಿ ಕಡತ ತಯಾರಿಸಲಾಗಿತ್ತು. ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 4 ರೈತರ ಜಮೀನು ಮಾತ್ರ ಮಂಜೂರಾಗಿದೆ. ಸೂಕ್ತ ದಾಖಲೆ ಇಲ್ಲದೆ 53 ಅರ್ಜಿಗಳು ಗ್ರಾಪಂ ಹಂತದಲ್ಲೇ ವಜಾ ಆಗಿತ್ತು. ಉಳಿದ 86 ಅರ್ಜಿಗಳನ್ನು ದಾಖಲೆ ಸರಿ ಇಲ್ಲವೆಂದು ತರೀಕೆರೆ ಉಪ ವಿಭಾಗಾಧಿಕಾರಿಗಳು ವಜಾ ಮಾಡಿದ್ದರು. ಯಾವ ದಾಖಲೆ ಎಂದು ಸ್ಪಷ್ಟಪಡಿಸಿಲ್ಲ. ಕಡತಗಳನ್ನು ಕ್ರಮಬದ್ಧವಾಗಿ ಮಾಡಬೇಕು ಎಂದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net