ಮೂಡಿಗೆರೆ ಪಪಂ ಕಚೇರಿ ಎದುರು ರೈತ ಸಂಘದ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಕಸ ಸುರಿದು ಪ್ರತಿಭಟನೆ ನಡೆಸಿದರು. ಡಿ.ಆರ್.ದುಗ್ಗಪ್ಪ ಗೌಡ, ಎಸ್.ಪಿ.ರಾಜು, ವೃಷಭರಾಜು, ಪಿ.ಕೆ.ನಾಗೇಶ್ ಗೌಡ, ತುಳಸೆ ಗೌಡ, ಡಿ.ಎಸ್.ರಮೇಶ್, ಕೃಷ್ಣ, ಪದ್ಮರಾಜ್, ಬಸವರಾಜಪ್ಪ ಇತರರಿದ್ದರು.
ಮೂಡಿಗೆರೆ: ಪಟ್ಟಣದ ಘನತ್ಯಾಜ್ಯ ಸಂಗ್ರಹ ಮತ್ತು ನಿರ್ವಹಣೆ ಮಾಡುವಲ್ಲಿ ಪಪಂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಪಟ್ಟಣದ ನಿವಾಸಿಗಳು ಹಾಗೂ ರೈತ ಮುಖಂಡರು ಸೋಮವಾರ ಪಪಂ ಕಚೇರಿ ಎದುರು ಕಸ ಸುರಿದು ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್.ದುಗ್ಗಪ್ಪ ಗೌಡ ಮಾತನಾಡಿ, ಪಟ್ಟಣದ ಎಲ್ಲೆಂದರಲ್ಲಿ ಕೆಲವರು ಕಸ ಹಾಕುತ್ತಿದ್ದಾರೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹ ವಾಹನಗಳು ಪ್ರತಿದಿನ ಮನೆಗಳಿಂದ ಕಸ ಸಂಗ್ರಹಿಸಲು ಹೋಗುತ್ತಿಲ್ಲ. ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಕೆಲವರು ತಂದು ರಸ್ತೆ ಬದಿಯಲ್ಲಿ ಹಾಕುತ್ತಿರುವುದರಿಂದ ಮಳೆ ನೀರಿನೊಂದಿಗೆ ಕಸ ಸೇರಿ ಕುಡಿಯುವ ನೀರಿನ ಬಾವಿ ಮತ್ತು ನದಿಗೆ ಸೇರುತ್ತಿದೆ. ಪಟ್ಟಣದ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಕೈಗೊಂಡು ಸಮಸ್ಯೆಗೆ ಕೂಡಲೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಎಸ್.ಪಿ.ರಾಜು ಮಾತನಾಡಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೃದಿಂದ ಕಸ, ಕೋಳಿ ತ್ಯಾಜ್ಯ ಮತ್ತು ಹೋಟೆಲ್ ತ್ಯಾಜ್ಯವನ್ನು ಪಟ್ಟಣದ ಅಲ್ಲಲ್ಲಿ ಸುರಿದು ಹೋಗುತ್ತಾರೆ. ಇದರಿಂದ ಪಟ್ಟಣದಲ್ಲಿ ದುರ್ನಾಥ ಬೀರುತ್ತಿದೆ. ವಿವಿಧ ಬಡಾವಣೆಯ ಮನೆಗಳಿಂದ, ಹೋಟೆಲ್, ಕೋಳಿ, ಮೀನು, ಮಾಂಸದ ಅಂಗಡಿಗಳಿಂದ ಸಂಗ್ರಹವಾಗುವ ತ್ಯಾಜ್ಯ ಮತ್ತು ಕಸವನ್ನು ಆಟೋ ಟಿಪ್ಪರ್‌ಗಳಲ್ಲಿ ಸಂಗ್ರಹಿಸಿ ಪಪಂ ಆಡಳಿತ ಗುರುತಿಸಿರುವ ಜಾಗಕ್ಕೆ ಸಾಗಿಸಬೇಕು. ಆದರೆ ಪ್ರತಿದಿನವೂ ಎಲ್ಲ ಬಡಾವಣೆಗಳಿಗೆ ಕಸ ಸಂಗ್ರಹ ವಾಹನ ಬರುತ್ತಿಲ್ಲ. ಕೆಲವೊಮ್ಮೆ ವಾರಗಟ್ಟಲೆ ಡೀಸೆಲ್ ಇಲ್ಲದೆ ಕಸ ಸಂಗ್ರಹಿಸುವ ವಾಹನ ರಸ್ತೆ ಬದಿಯಲ್ಲಿ ನಿಂತಿರುತ್ತದೆ. ವಾಹನಗಳು ಕಸ ಸಂಗ್ರಹಕ್ಕಾಗಿ ಬಡಾವಣೆಗೆ ಹೋಗದಿದ್ದರೆ ನಿವಾಸಿಗಳು ಅನಿವಾರ್ಯವಾಗಿ ರಸ್ತೆ ಬದಿಗೆ ಕಸ ಮತ್ತು ತ್ಯಾಜ್ಯಗಳನ್ನು ತಂದು ಸುರಿದು ಹೋಗುತ್ತಾರೆ. ಪಪಂ ಮುಖ್ಯಾಧಿಕಾರಿ ಕಚೇರಿಗೆ ಹಾಜರಾಗುತ್ತಿಲ್ಲ. ಆರೋಗ್ಯ ನಿರೀಕ್ಷಕ ಮೊಬೈಲ್ ಕರೆಯನ್ನು ಸ್ವೀಕರಿಸುತ್ತಿಲ್ಲ. ಪಟ್ಟಣ ಪಂಚಾಯಿತಿ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೃಷಭರಾಜ್, ಜಿಲ್ಲಾ ಸಂಚಾಲಕ ಪಿ.ಕೆ.ನಾಗೇಶಗೌಡ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷ ತುಳಸೇಗೌಡ, ತಾಲೂಕು ಸಂಚಾಲಕ ಡಿ.ಎಸ್.ರಮೇಶ್, ಕೃಷ್ಣ ಕಳಸ, ಪದ್ಮರಾಜ್, ಬಸವರಾಜಪ್ಪ ಇತರರಿದ್ದರು.