ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರು

ಮೂಡಿಗೆರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮನ್ವಯ ಸಮಿತಿ ಸದಸ್ಯರು ಸಭೆಗೆ ಹಾಜರಾಗಿದ್ದರು.
ಮೂಡಿಗೆರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮನ್ವಯ ಸಮಿತಿ ಸದಸ್ಯರು ಸಭೆಗೆ ಹಾಜರಾಗಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕಿ ನಯನಾ ಮೋಟಮ್ಮ ಸಭೆ ನಡೆಸಿದ್ದಕ್ಕೆ ವಿರೋಧ
  • ಪಕ್ಷದ ಸಮನ್ವಯ ಸಮಿತಿಯಿಂದ ಪ್ರತ್ಯೇಕ ಮೀಟಿಂಗ್

ಮೂಡಿಗೆರೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗುತ್ತಿದೆ. ಶಾಸಕಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬಣಗಳ ನಡುವಿನ ಕಿತ್ತಾಟದಿಂದ ಪ್ರತ್ಯೇಕ ಸಭೆಗಳು ನಡೆದು ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ.

ಶಾಸಕಿ ನಯನಾ ಮೋಟಮ್ಮ ಅವರು ಶಾಸಕರ ಕಚೇರಿಯಲ್ಲಿ ಭಾನುವಾರ ಸಭೆ ನಡೆಸಿ ಬ್ಲಾಕ್ ಮತ್ತು ಹೋಬಳಿ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆಸಿದರು. ಶಾಸಕರ ನೇತೃತ್ವದಲ್ಲಿ ನಡೆದ ಸಭೆಗೆ ಅಸಮಾಧಾನ ವ್ಯಕ್ತಪಡಿಸಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದ ಬಣದವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆಯನ್ನು ಸೋಮವಾರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದು ಶಾಸಕರ ವಿರುದ್ಧ ಹರಿಹಾಯ್ದರು.

ಸೋಮವಾರ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಮುಖಂಡರು ಶಾಸಕಿ ನಯನಾ ಮೋಟಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕಿಗೆ ಪಕ್ಷದ ಸಭೆ ಕರೆಯುವ ಅಧಿಕಾರವಿಲ್ಲ. ಆದರೆ ಶಾಸಕಿ ಪಕ್ಷದ ಮುಖಂಡರ ಸಭೆ ಕರೆದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚಿಸಿರುವುದು ಅವರ ಅಧಿಕಾರ ವ್ಯಾಪ್ತಿಯನ್ನು ಮೀರಿದ ಕಾರ್ಯ. ಪಕ್ಷದ ಸಭೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕರೆಯಬೇಕೇ ಹೊರತು ಶಾಸಕರಲ್ಲ. ಸಭೆ ಕರೆಯಲು ಶಾಸಕರಿಗೆ ಪಕ್ಷದ ನಿಯಮಾವಳಿಯಲ್ಲಿ ಅಧಿಕಾರವಿಲ್ಲ ಎಂದು ಹರಿಹಾಯ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ನೇತೃತ್ವದಲ್ಲಿ ಹಿಂದಿನ ಭಾರಿ ಕಾಂಗ್ರೆಸ್ 10ಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಅಧಿಕಾರ ಹಿಡಿದಿದೆ. ಪಟ್ಟಣ ಪಂಚಾಯಿತಿ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 20 ವರ್ಷದ ನಂತರ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಪಡೆಯಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಅವರ ಪರಿಶ್ರಮ ಕಾರಣ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನಿಭಾಯಿಸಲು ಸಮರ್ಥರಾಗಿರುವ ಸುರೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಬೇಕು. ಗ್ರಾಪಂ, ತಾಪಂ ಮತ್ತು ಜಿಪಂ ಚುನಾವಣೆ ಸಮೀಪಿಸುತ್ತಿರುವುದರಿಂದ ಬ್ಲಾಕ್, ಹೋಬಳಿ ಮತ್ತು ಗ್ರಾಪಂ ಘಟಕಗಳ ಅಧ್ಯಕ್ಷರನ್ನು ಬದಲಾಯಿಸಬಾರದೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎಂ.ಎಂ.ಲಕ್ಷ್ಮಣ ಗೌಡ, ಎಂ.ಪಿ.ಮನು, ಬಿ.ಎಸ್.ಜಯರಾಮ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಕ್ರಂ ಹಾಜಿ, ಸಿ.ಕೆ.ಇಬ್ರಾಹಿಂ, ಸಿ.ಎಚ್.ಅಹಮದ್ ಬಾವ, ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್, ಕೆ.ಕೆ.ರಾಮಯ್ಯ, ಹಿಂದುಳಿದ ವರ್ಗಗಳ ಘಟಕದ ತಾಲೂಕು ಅಧ್ಯಕ್ಷ ಷಣ್ಮುಖಾನಂದ, ಮರಗುಂದ ಪ್ರಸನ್ನ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಇಮ್ರಾನ್, ಗೃಹಮಂಡಳಿ ಮಾಜಿ ಅಧ್ಯಕ್ಷ ಜಿ.ಎಚ್.ಹಾಲಪ್ಪಗೌಡ, ಡಿ.ಕೆ.ಉದಯಶಂಕರ್, ಎ.ಸಿ.ಅಯೂಬ್ ಹಾಜಿ, ವಿನಯ್‌ಕುಮಾರ್ ಇತರರಿದ್ದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಳಸ, ಆಲ್ದೂರು, ಮೂಡಿಗೆರೆ ಸೇರಿ ಮೂರು ಕಾಂಗ್ರೆಸಿನ ಬ್ಲಾಕ್‌ಗಳಿವೆ. ಕಳೆದ ಚುನಾವಣೆಯಲ್ಲಿ ಶಾಸಕಿ ನಯನಾ ಮೋಟಮ್ಮ ವಿರುದ್ಧವಾಗಿದ್ದ ಕೆಲವರು ಮೂಡಿಗೆರೆ ಬ್ಲಾಕ್‌ನಲ್ಲಿ ಮಾತ್ರ ಸಮನ್ವಯ ಸಮಿತಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವೆ ಮೋಟಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಳಿಕೆ ನೀಡಿರುವ ಅವರು, ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ರಚಿಸಿರುವ ಕಾಂಗ್ರೆಸ್ ಸಮನ್ವಯ ಸಮಿತಿಯಲ್ಲಿ ಶಾಸಕರು, ಮಾಜಿ ಸಚಿವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯಾರೊಬ್ಬರೂ ಇಲ್ಲ. ಕಳಸ ಮತ್ತು ಆಲ್ದೂರು ಬ್ಲಾಕ್ ಕಾಂಗ್ರೆಸಿನ ಮುಖಂಡರನ್ನು ಹೊರಗಿಟ್ಟು ಪಕ್ಷದ ಪ್ರಮುಖರನ್ನು ಕಡೆಗಣಿಸಿ ಸಮನ್ವಯ ಸಮಿತಿ ರಚಿಸಲಾಗಿದೆ. ಶಾಸಕಿ ನಯನಾ ಮೋಟಮ್ಮ ಅವರು ಕ್ಷೇತ್ರವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಕಾರ್ಯಕರ್ತರ ಮನವಿಗೆ ಶಾಸಕಿ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಶಾಸಕರ ಕಚೇರಿಯಲ್ಲಿ ಕೆಲವೊಮ್ಮೆ ಸಭೆ ನಡೆಸಬೇಕಾಗುತ್ತದೆ. ಸಚಿವರು ಕೂಡ ಅವರವರ ಕಚೇರಿಯಲ್ಲಿ ಸಭೆಗಳನ್ನು ನಡೆಸುತ್ತಾರೆ. ಶಾಸಕಿ ನಯನಾ ಮೋಟಮ್ಮ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕ್ಷೇತ್ರದ ಮೂರೂ ಬ್ಲಾಕ್‌ಗಳ ಹಿರಿಯರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಿದ್ದರೆ ನಾನು ಕೂಡ ಒಪ್ಪಿಕೊಳ್ಳುತ್ತಿದ್ದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೋಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಾಗ ಸಭೆ ಕರೆದು ಚರ್ಚಿಸುತ್ತಾರೆ. ನನ್ನನ್ನು ಹಲವು ಬಾರಿ ಆಹ್ವಾನಿಸಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲಿ ಕೆಪಿಸಿಸಿ ನಿರ್ದೇಶನಗಳನ್ನು ಪಾಲಿಸಬೇಕು. ಪಕ್ಷದ ಬೆಳವಣಿಗೆಗೆ ಉತ್ತೇಜನ ನೀಡಬೇಕು. ಹಾಗಾದರೆ ಮಾತ್ರ ಸಮನ್ವಯ ಸಮಿತಿಗೆ ಅರ್ಥ ಬರುತ್ತದೆ. ಶಾಸಕರ ವಿರುದ್ಧವಾಗಿ ಸಮನ್ವಯ ಸಮಿತಿ ರಚಿಸಿದರೆ ಪ್ರಯೋಜನವಿಲ್ಲ. ಕಾರ್ಯಕರ್ತರು ಶಾಸಕರ ಜತೆಗಿದ್ದಾರೆ. ಮುಂದಿನ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net