ಮೀಸಲು ಅರಣ್ಯದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಸಾವು

ಸಾರಗೋಡು ಮೀಸಲು ಅರಣ್ಯದಲ್ಲಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಕಾಡಾನೆಯನ್ನು ಸಾರ್ವಜನಿಕರು ವೀಕ್ಷಿಸಿದರು.
ಸಾರಗೋಡು ಮೀಸಲು ಅರಣ್ಯದಲ್ಲಿ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಕಾಡಾನೆಯನ್ನು ಸಾರ್ವಜನಿಕರು ವೀಕ್ಷಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹೆಬ್ಬಾಳಗದ್ದೆ ಜಮೀನಿನಲ್ಲಿ
  • ಒಂಟಿ ಸಲಗ
ಆಲ್ದೂರು: ಸಾರಗೋಡು ಮೀಸಲು ಅರಣ್ಯದಲ್ಲಿ  ಕಾಡು ಪ್ರಾಣಿಗಳನ್ನು ಬೇಟೆಯಾಡಲು ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ  ಕಾಡಾನೆ ಸಾವನ್ನಪ್ಪಿದೆ. 
ಕುಂದೂರು ಮೀಸಲು ಅರಣ್ಯದ ಹೆಬ್ಬಾಳಗದ್ದೆ ಜಮೀನಿನಲ್ಲಿ ಒಂಟಿ ಸಲಗ ಸಾವನ್ನಪ್ಪಿರುವುದನ್ನು ಕಂಡ ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಡಿಎಫ್‌ಒ ಬೋರಯ್ಯ, ಎಸಿಎಫ್ ಆಕರ್ಷ್, ಆಲ್ದೂರು ವಲಯ ಅರಣ್ಯಾಧಿಕಾರಿ ಹರೀಶ್, ಡಿಆರ್‌ಎಫ್‌ಒ ಸಂದೀಪ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.
ಸಾರಗೋಡು ಮೀಸಲು ಅರಣ್ಯದೊಳಗೆ ವಿದ್ಯುತ್ ಸಂಪರ್ಕ ಹೇಗೆ ನೀಡಲಾಯಿತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಹಿಂದೆ ಚಂಡಗೋಡು ಕಾಫಿ ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವನ್ನಪ್ಪಿತ್ತು. ಅರೆನೂರು ಭಾಗದಲ್ಲಿ ಕಾಡು ಪ್ರಾಣಿಗಳನ್ನು ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಗಾಯಗೊಂಡಿತ್ತು. ಇದಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.
ಕೆಳ ಮಟ್ಟದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಅವುಗಳು ತಗುಲಿ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿವೆ. ಆಲ್ದೂರು ವ್ಯಾಪ್ತಿಯ ಜಮೀನಿನ ತುಡಕೂರು ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಆನೆಗಳ ಹಿಂಡು ಹಾದು ಹೋಗುವ ಸಂದರ್ಭದಲ್ಲಿ ಬೃಹತ್ ಗಾತ್ರದ ಆನೆಯ ತಲೆ ವಿದ್ಯುತ್ ತಂತಿಗೆ ತಗುಲಿ ಸಾವನ್ನಪ್ಪಿತ್ತು.  
ಮೀಸಲು ಅರಣ್ಯದೊಳಗೆ ಸಾರ್ವಜನಿಕರಿಗೆ ಹೋಗಲು ಅವಕಾಶವಿಲ್ಲ. ಸಾರಗೋಡು ಮೀಸಲು ಅರಣ್ಯದಲ್ಲಿ ವಿದ್ಯುತ್ ಸಂಪರ್ಕ ಹೇಗೆ ಕಲ್ಪಿಸಲಾಗಿದೆ ಎಂಬ ಅನುಮಾನ ಮೂಡಿದೆ. ಇಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ತಂಡ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬ ಅನುಮಾನ ಮೂಡಿದೆ. ಕಾಡಾನೆ ಸತ್ತು ಮೂರು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.   ವಾಚರ್‌ಗಳು ಏಕೆ ಗಮನಿಸಿರಲಿಲ್ಲ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. 
ಮೀಸಲು ಅರಣ್ಯದೊಳಗೆ ವನ್ಯಜೀವಿಗಳು ಸಾವನ್ನಪ್ಪುತ್ತಿರುವುದಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದು ತನಿಖೆಯಾಗಬೇಕು  ಎಂದು ಒತ್ತಾಯಿಸಿದ್ದಾರೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net