ನಾಟಕಗಳು ಮನೋವಿಕಾಸಕ್ಕೆ ಪ್ರೇರಣೆ

ಅಜ್ಜಂಪುರದ ಕೈಲಾಸಂ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ನಾಟಕೋತ್ಸವವನ್ನು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಡಿ.ಎಸ್.ಸುರೇಶ್ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ಬಿ.ರಂಗಸ್ವಾಮಿ, ನಿಸಾರ್ ಅಹಮದ್, ಜಿ.ಬಿ.ಸುರೇಶ್, ಸೂರಿ ಶ್ರೀನಿವಾಸ್, ಎ.ಸಿ.ಚಂದ್ರಪ್ಪ ಇತರರಿದ್ದರು.
ಅಜ್ಜಂಪುರದ ಕೈಲಾಸಂ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ನಾಟಕೋತ್ಸವವನ್ನು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಡಿ.ಎಸ್.ಸುರೇಶ್ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ಬಿ.ರಂಗಸ್ವಾಮಿ, ನಿಸಾರ್ ಅಹಮದ್, ಜಿ.ಬಿ.ಸುರೇಶ್, ಸೂರಿ ಶ್ರೀನಿವಾಸ್, ಎ.ಸಿ.ಚಂದ್ರಪ್ಪ ಇತರರಿದ್ದರು.
Published on
ತರೀಕೆರೆ: ನಾಟಕಗಳು ಮನೋರಂಜನೆಗೆ ಸೀಮಿತವಾಗದೆ ಮನೋವಿಕಾಸಕ್ಕೆ ಪ್ರೇರಣೆಯಾಗಬೇಕು ಎಂದು ಸಾಣೇಹಳ್ಳಿ ಪೀಠಾಧ್ಯಕ್ಷ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಜ್ಜಂಪುರ ಪಟ್ಟಣದ ಕೈಲಾಸಂ ಕಲಾಕ್ಷೇತ್ರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಗೆಳೆಯರ ಬಳಗದ ಸಹಯೋಗದಲ್ಲಿ ಕೈಲಾಸಂ ಕಲಾಕ್ಷೇತ್ರದ ರಜತಮಹೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಂಕ್ರಾಂತಿ ನಾಟಕೋತ್ಸವದ ಸಮಾರೋಪದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ನಾಟಕ ಜೀವಂತ ಕಲೆ, ಇಂಥ ಸಾಹಿತ್ಯ, ಸಂಗೀತ, ಸಂಸ್ಕೃತಿಯ ಸಮಾಗಮವಾದ ನಾಟಕಗಳು ಯುವಕರ ಬದುಕಿನ ಆದ್ಯತೆಯಾಗಬೇಕು. ಯುವಪೀಳಿಗೆ ಸಕ್ರಿಯವಾಗಿ ಈ ಕಲೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಾರ್ಥಕ್ಯ ಕಾಣಬೇಕು ಎಂದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಬಯಲು ಸೀಮೆಯಾಗಿರುವ ಅಜ್ಜಂಪುರ ಶತಮಾನಗಳಿಂದಲೂ ಕಲೆ, ಸಾಹಿತ್ಯದ ತವರೂರಾಗಿದೆ. ಕಲೆ, ಸಾಹಿತ್ಯ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.
ಗೆಳೆಯರ ಬಳಗ ರಂಗ ತಂಡದ ಅಧ್ಯಕ್ಷ ಎ.ಸಿ.ಚಂದ್ರಪ್ಪ ಮಾತನಾಡಿ, ಕಲಾ ಪೋಷಣೆಗಾಗಿ ಶ್ರಮಿಸುತ್ತಿರುವ ಬಳಗ ನಾಲ್ಕು ದಶಕಗಳಿಂದ ಪಟ್ಟಣದಲ್ಲಿ ನಾಟಕೋತ್ಸವ ಆಯೋಜಿಸುತ್ತ ಬಂದಿದೆ. ನಾಡಿನ ಹೆಸರಾಂತ ಕಲಾ ತಂಡಗಳಿಂದ ಪ್ರದರ್ಶನಗೊಳ್ಳುತ್ತಿರುವ ವಿವಿಧ ನಾಟಕಗಳು ಜನರ ಮನಸ್ಸನ್ನು ಅರಳಿಸುವ, ಸಂವೇದನೆಗೊಳಿಸುವ ಕೆಲಸ ಮಾಡುತ್ತಿದೆ. ನಾಟಕ ಆಯೋಜಿಸುವ ಮಹತ್ಕಾರ್ಯಕ್ಕೆ ಬಳಗ ಮಾತ್ರವಲ್ಲ, ರಾಜಕೀಯ ಪ್ರಮುಖರು, ಇಲ್ಲಿನ ಸಾರ್ವಜನಿಕರ ಕೊಡುಗೆ ಸಹ ಅನನ್ಯ ಎಂದು ತಿಳಿಸಿದರು.
ತಾಪಂ ಇಒ ಎಂ.ಕೆ.ವಿಜಯಕುಮಾರ್ ಮಾತನಾಡಿ, ಜೀವನಕ್ಕೆ ಉತ್ಸಾಹ ನೀಡುತ್ತಿದ್ದ ನಾಟಕಗಳಂಥ ಹಳೆಯ ಕಲೆಯ ಅರಿವೇ ಇಲ್ಲದ ಇಂದಿನ ಯುವಕರು ಸಾಮಾಜಿಕ ಮಾಧ್ಯಮಗಳ ಭ್ರಮಾಲೋಕದಲ್ಲಿ ಮುಳುಗಿದ್ದು ಅವರಿಗೆ ಬದುಕಿನ ವಾಸ್ತವಗಳನ್ನು ಅರ್ಥಮಾಡಿಸಿ ಜೀವನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ತಿಳಿಸಬೇಕಿದೆ ಎಂದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net