ಜೈನತೀರ್ಥಂಕರ ವಿಗ್ರಹಗಳ ಪತ್ತೆ

ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ಗಂಗಮ್ಮ ಎಂದು ಪೂಜಿಸಲ್ಪಡುವ ಅಪ್ರಕಟಿತ ತೀರ್ಥಂಕರ ವಿಗ್ರಹ.
ಕಡೂರು ತಾಲೂಕಿನ ದೊಡ್ಡಪಟ್ಟಣಗೆರೆ ಗ್ರಾಮದಲ್ಲಿ ಗಂಗಮ್ಮ ಎಂದು ಪೂಜಿಸಲ್ಪಡುವ ಅಪ್ರಕಟಿತ ತೀರ್ಥಂಕರ ವಿಗ್ರಹ.
Published on
ಕಡೂರು: ದೊಡ್ಡಪಟ್ಟಣಗೆರೆ ಗ್ರಾಮದ ಕುರುಬಗೆರೆ ಶ್ರೀ ಕಟ್ಟೆಹೊಳೆಯಮ್ಮ ದೇವಾಲಯದ ಎಡಭಾಗದಲ್ಲಿ ಹರಿಯುವ ವೇದಾ ನದಿ ಪಾತ್ರದಲ್ಲಿ ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನತೀರ್ಥಂಕರ ವಿಗ್ರಹಗಳನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಅಧ್ಯಯನ ಮಾಡಿದ್ದು ತಾಲೂಕಿನ ಪ್ರಾಚೀನ ಜೈನ ಇತಿಹಾಸದ ಮೇಲೆ ಬೆಳಕು ಚೆಲ್ಲಿದ್ದಾರೆ.
ಕಟ್ಟೆಹೊಳೆಯಮ್ಮ ದೇವಾಲಯದ ಎಡಪಾರ್ಶ್ವದಲ್ಲಿ ಹರಿಯುತ್ತಿರುವ ವೇದಾ ನದಿ ಹರಿವಿನ ಪಾತ್ರದಲ್ಲಿ ಸುಂದರವಾದ ಎರಡು ಶಿಲಾ ವಿಗ್ರಹಗಳು ಕಂಡು ಬಂದಿವೆ. ಇಲ್ಲಿರುವ ಎರಡೂ ವಿಗ್ರಹಗಳ ಬಲಭಾಗದ ಮೊದಲನೆಯ ವಿಗ್ರಹ ಸಿಂಹಪೀಠದ ಮೇಲೆ ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದು, ಹಿಂಭಾಗದಲ್ಲಿ ಇಬ್ಬರು ಚಾಮರಧಾರಿಗಳ ಶಿಲ್ಪಗಳಿವೆ. ವಿಗ್ರಹದ ಮುಖದ ಮುಂಭಾಗ ಸವೆದಿದೆ. ಬಳಪದ ಕಲ್ಲಿನ ವಿಗ್ರಹವು 1.34 ಮೀ. ಎತ್ತರ ಹಾಗೂ 0.90 ಮೀ. ಅಗಲವಿದೆ. ಸ್ಥಳೀಯ ಗ್ರಾಮಸ್ಥರು ಮೊದಲಿನಿಂದಲೂ ಸಂತಾನ ಲ ನೀಡುವ ಗಂಗಮ್ಮ ಎಂದು ಕರೆಯುತ್ತಿದ್ದು ಸಂತಾನ ಭಾಗ್ಯವಿಲ್ಲದ ಮಹಿಳೆಯರು ಈ ವಿಗ್ರಹವನ್ನು ಶ್ರದ್ಧಾಭಕ್ತಿಯಿಂದ ಬೆಳಗಿನ ಜಾವ ಪೂಜೆ ಮಾಡುವುದರಿಂದ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ಅನೂಚಾನವಾದ ನಂಬಿಕೆಯಿಂದ ಇಂದಿಗೂ ಪೂಜಿಸುತ್ತಿರುವ ಈ ವಿಗ್ರಹದ ಶಿಲ್ಪಲಕ್ಷಣದ ಆಧಾರವಾಗಿದೆ. 
ಎಡಭಾಗದ ವಿಗ್ರಹ ಸಹ ಪದ್ಮಾಸನ ಭಂಗಿಯಲ್ಲಿದ್ದು, ಹಿಂಭಾಗದ ಪ್ರಭಾವಳಿಯ ಎರಡೂ ಕಡೆ ನಿಂತಿರುವ ಸಿಂಹ ಹಾಗೂ ಗಜಮುಖಗಳ ಶಿಲ್ಪಗಳಿದ್ದು ಹಿಂಭಾಗದಲ್ಲಿ ಸರ್ವಾಲಂಕೃತ ಚಾಮರಧಾರಿ ಪುರುಷರ ಶಿಲ್ಪಗಳಿವೆ. ವಿಗ್ರಹದ ತಲೆ ಮೇಲೆ ಮೂರು ಹಂತದ ಮುಕ್ಕೊಡೆ ಶಿಲ್ಪವಿದೆ. 
ವಿಗ್ರಹ ಸುಂದರವಾಗಿದ್ದು 1.25 ಮೀ. ಉದ್ದ ಹಾಗೂ 0.79 ಮೀ. ಅಗಲವಿದೆ. ಶಿಲ್ಪ ಲಕ್ಷಣದ ಆಧಾರದ ಮೇಲೆ ಈ ವಿಗ್ರಹವೂ  ಹೊಯ್ಸಳರ ಕಾಲದ್ದಾಗಿದೆ. ಬಳಪದ ಕಲ್ಲಿನಿಂದ ನಿರ್ಮಿಸಲ್ಪಟ್ಟಿರುವ ಹೊಯ್ಸಳರ ಕಾಲದ ತೀರ್ಥಂಕರ ವಿಗ್ರಹವೆಂದು ಜೈನ ತೀರ್ಥಂಕರ ವಿಗ್ರಹಗಳ ಲಭ್ಯತೆಯ ಹಿನ್ನೆಲೆಯಲ್ಲಿ 12-13ನೇ ಶತಮಾನದಲ್ಲಿ ಹೊಯ್ಸಳರ ಆಡಳಿತಕ್ಕೊಳಪಟ್ಟಿದ್ದ ದೊಡ್ಡಪಟ್ಟಣಗೆರೆ ಪ್ರದೇಶದಲ್ಲಿ ದ್ವಿಕೂಟ ಜೈನಬಸದಿಯೊಂದು ಇದ್ದಿರಬಹುದಾಗಿದೆ. 
 ಬಸದಿಯ ಮೂಲನಾಯಕ ತೀರ್ಥಂಕರರೇ ಈ ವಿಗ್ರಹಗಳಾಗಿರುವ ಸಾಧ್ಯತೆಗಳಿದ್ದು ಕಾಲದ ಪ್ರಭಾವ ಹಾಗೂ ಮತಸಂಘಷರ್ಗಳ ಕಾರಣ ಬಸದಿ ನಾಶವಾಗಿದ್ದು ಈ ವಿಗ್ರಹಗಳನ್ನು ವೇದಾ ನದಿಗೆ ಎಸೆದಿರುವ ಸಾಧ್ಯತೆಗಳಿವೆ. ಈ ವಿಗ್ರಹಗಳ ಪಾದಪೀಠದಲ್ಲಿ ಲಾಂಛನಗಳು ಲಭ್ಯವಿಲ್ಲದ ಕಾರಣ ಇವು ಯಾವ ತೀಥರ್ಂಕರ ವಿಗ್ರಹಗಳೆಂದು ಹೇಳಲು ಸಾಧ್ಯವಾಗುತ್ತಿಲ್ಲ ಮತ್ತು ಈ ವಿಗ್ರಹಗಳಿದ್ದ ಜೈನ ಬಸದಿ ಅಸ್ತಿತ್ವದ ಕುರಿತು ಹೆಚ್ಚಿನ ಸಂಶೋಧನೆ ನಡೆಸಿರುವ ಬಗ್ಗೆ ಸಂಶೋಧಕ ಎಚ್.ಆರ್.ಪಾಂಡುರಂಗ ಮಾಹಿತಿ ಹಂಚಿಕೊಂಡಿದ್ದಾರೆ. 
 ತೀರ್ಥಂಕರ ವಿಗ್ರಹಗಳ ಶೋಧನಾ ಕ್ಷೇತ್ರ ಕಾರ್ಯದಲ್ಲಿ ಕಟ್ಟೆಹೊಳೆಯಮ್ಮ ದೇವಾಲಯದ ಆಡಳಿತ ಮಂಡಳಿಯ ಎಸ್.ಬಿ.ಹನುಮಂತಪ್ಪ, ಸಣ್ಣೇಗೌಡನ ಕೊಪ್ಪಲು ಮತ್ತು ಕೆ.ಎಂ.ಮಲ್ಲೇಶಪ್ಪ ಕುರುಬಗೆರೆ ಹಾಗೂ ದೇವಾಲಯದ ಅರ್ಚಕ ಟಿ.ಆನಂದ್ ಸಹಕರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net