ಶೃಂಗೇರಿ: ದೇಶದಲ್ಲಿ 90 ಕೋಟಿ ಜನರು ಇಂಟರ್‌ನೆಟ್ ಬಳಸುತ್ತಿದ್ದು ಆಧುನಿಕತೆಯ ಜಾಲ ಇಂದಿನ ಅಗತ್ಯವಾಗಿದೆ. ಡಿಜಿಟಲ್ ಶಿಕ್ಷಣ ಈಗ ಅನಿವಾರ್ಯವಾಗಿದೆ ಎಂದು ಕಳಸಾಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಕಲ್ಕಟ್ಟೆ ನಾಗರಾಜರಾವ್ ಹೇಳಿದರು.
ಕಿಗ್ಗಾದ ಅಭಿನವ ರಮಾನಂದ ಪ್ರೌಢಶಾಲೆಯಲ್ಲಿ ಶನಿವಾರ ಜೆಸಿಬಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ಸಾಮಾಜಿಕ ಜಾಲತಾಣದ ಬಗ್ಗೆ ಮಾತನಾಡಿದರು. ನಿರ್ಭಯ ಪ್ರಕರಣದಲ್ಲಿ ಕೂಡ ನಮ್ಮಲ್ಲಿ ಸಾಮಾಜಿಕ ಜಾಲತಾಣದಲ್ಲಿ ಚಳವಳಿ ರೂಪುಗೊಂಡಿತ್ತು. ಮೀಟೂ ಚಳವಳಿ ಈಗಲೂ ನಡೆಯುತ್ತಿದೆ. ಸಾಮಾಜಿಕ ಜಾಲತಾಣ ಕೇವಲ ವ್ಯಕ್ತಿಯ ಧ್ವನಿಯಾಗಿರದೆ ಅದು ಸಮೂಹ ಧ್ವನಿಯಾಗುತ್ತಿರುವುದು ಮಹತ್ವದ ಸಂಗತಿಯಾಗಿದೆ ಎಂದರು.
ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಎ.ಜಿ.ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಎನ್‌ಎಸ್‌ಎಸ್ ಮೂಲಕ ಹಲವು ವಿಷಯ ಕಲಿಯಬಹುದಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯದ ಬಗ್ಗೆ ಉಪನ್ಯಾಸ ನೀಡಲಾಗುತ್ತದೆ ಎಂದರು.
ವಿನಾಯಕಶಾಸ್ತ್ರೀ, ಚಂದ್ರಶೇಖರ್ ಹೆಬ್ಬಾರ್, ನಾಜೀರ್ ಕೆಲ್ಲಾರ್, ಎನ್‌ಎಸ್ ಎಸ್ ಅಧಿಕಾರಿ ಸಂತೋಷ್‌ಕುಮಾರ್ ಇದ್ದರು.