ಸಣ್ಣ ರೈತರ ಸಾಗುವಳಿ ಅರ್ಜಿ ಪರಿಗಣಿಸಿ

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ನಡೆದ ಚರ್ಚೆಯಲ್ಲಿ ಬಿ.ಎಸ್.ಜಯರಾಂ ಮಾತನಾಡಿದರು. ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ, ಎಂ.ಎಸ್.ಅನಂತ್, ಎಚ್.ಜಿ.ಸುರೇಂದ್ರ, ಸಿ.ಕೆ.ಇಬ್ರಾಹಿಂ, ಡಿ.ಕೆ.ಉದಯಶಂಕರ್ ಇತರರಿದ್ದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜತೆ ನಡೆದ ಚರ್ಚೆಯಲ್ಲಿ ಬಿ.ಎಸ್.ಜಯರಾಂ ಮಾತನಾಡಿದರು. ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ, ಎಂ.ಎಸ್.ಅನಂತ್, ಎಚ್.ಜಿ.ಸುರೇಂದ್ರ, ಸಿ.ಕೆ.ಇಬ್ರಾಹಿಂ, ಡಿ.ಕೆ.ಉದಯಶಂಕರ್ ಇತರರಿದ್ದರು.
Published on
ಮೂಡಿಗೆರೆ: ಕಂದಾಯ ಮತ್ತು ಅರಣ್ಯ ಭೂಮಿಯ ನಮೂನೆ 50, 53ರ ಭೂ ಮಂಜೂರಾತಿ ಹಗರಣದಲ್ಲಿ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ 5ರಿಂದ 10 ಗುಂಟೆ ಜಾಗ ಸಹಿತ ಅತ್ಯಂತ ಕಡಿಮೆ ಭೂಮಿಯನ್ನು ಸಾಗುವಳಿ ಮಾಡಿರುವ ಬಡ ರೈತರ ಅರ್ಜಿಗಳನ್ನು ಸರ್ಕಾರ ವಜಾ ಮಾಡಿರುವುದರಿಂದ ಸಣ್ಣ ರೈತರಿಗೆ ತೊಂದರೆಯಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಹೇಳಿದರು.
ಕಾಂಗ್ರೆಸ್ ಮುಖಂಡರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಯಾವುದೋ ಒಂದು ಜಮೀನಿನ ವಿಚಾರವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿ ಸಣ್ಣ ರೈತರ ಕಡಿಮೆ ವಿಸ್ತೀರ್ಣದ ಜಮೀನಿನ ಅರ್ಜಿ ಪರಿಗಣಿಸಬೇಕಾಗಿತ್ತು. ಆದರೆ ವಜಾಗೊಳಿಸಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಸಣ್ಣ ಹಿಡುವಳಿದಾರ ರೈತರು ಜೀವನ ನಡೆಸುವ ಸಲುವಾಗಿ ಖಾಲಿ ಇದ್ದ ಜಾಗವನ್ನು ಸಾಗುವಳಿ ಮಾಡಿಕೊಂಡಿದ್ದಾರೆ. ಅಂತಹ ಜಮೀನನ್ನು ಅಕ್ರಮ ಸಕ್ರಮ ಸಮಿತಿ ಮೂಲಕ ಅದೆ ರೈತರಿಗೆ ನೀಡುವ ಅಧಿಕಾರವಿದೆ. ಆ ನಿಟ್ಟಿನಲ್ಲಿ ರೈತರು ಸಮಿತಿಗೆ ಅರ್ಜಿ ಸಲ್ಲಿಸಿದ್ದರೂ ಅದನ್ನು ವಜಾ ಮಾಡಲಾಗಿದೆ. ಇದು ರೈತರ ಮೇಲಿನ ಸವಾರಿಯಾಗಿದೆ ಎಂದು ತಿಳಿಸಿದ್ದಾರೆ.
 ಸಮಸ್ಯೆಯನ್ನು ಮುಖ್ಯಮಂತ್ರಿಗಳು ಬಗೆಹರಿಸಿಕೊಡಬೇಕು. ರೈತರ ಅರ್ಜಿಯನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ ಅವರು, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಸದ್ಯದಲ್ಲೇ ಮಲೆನಾಡು ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಲುವಾಗಿ ಸಭೆ ನಡೆಸಲಾಗುವುದು. ಅದರಲ್ಲಿ ಪಾಲ್ಗೊಂಡು ಸಲಹೆ ನೀಡಲು ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಪರಿಮಿತಿಯಿಂದ 3.5 ಕಿ.ಮೀ ದೂರದಲ್ಲಿರುವ ಜಮೀನುಗಳನ್ನು ಹಾಗೂ ಗ್ರಾಮಾಂತರ ಭಾಗದಲ್ಲಿ ಗ್ರಾಪಂ ವ್ಯಾಪ್ತಿಯ ಪ್ಲಾಂಟೇಶನ್ ಜಮೀನುಗಳನ್ನು ಬಫರ್ ಜೋನ್ ವ್ಯಾಪ್ತಿಯಿಂದ ಹೊರಗಿಡಬೇಕು. ಇಲ್ಲವಾದರೆ ರೈತರಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ತಪ್ಪಿಸಲು ಸರ್ಕಾರ ಮುತುವರ್ಜಿ ವಹಿಸಬೇಕು ಎಂದು ಮನವಿ ಮಾಡಿದರು.
    ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ಕೆ.ಹರಿಪ್ರಸಾದ್ ಅವರನ್ನು ಕಾಂಗ್ರೆಸ್ ನಿಯೋಗ ಭೇಟಿ ಮಾಡಿ ಅಭಿನಂದಿಸಿತು.
ನಿಯೋಗದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಹಿರಿಯ ಕಾಂಗ್ರೆಸ್ ಮುಖಂಡರಾದ ಜಿ.ಎಚ್.ಹಾಲಪ್ಪಗೌಡ, ಎಂ.ಪಿ.ಮನು, ಡಿ.ಕೆ.ಉದಯಶಂಕರ್, ಯು.ಎಚ್.ಹೇಮಶೇಖರ್, ಸಿ.ಕೆ.ಇಬ್ರಾಹಿಂ, ಅಕ್ರಂ ಹಾಜಿ, ಬಿ.ಎ.ಉಮರ್, ಇಸಾಕ್ ಭೂತನಕಾಡು, ಮರಗುಂದ ಪ್ರಸನ್ನ, ಸಂಪತ್, ಪಿ.ಕೆ.ಹಮೀದ್, ಮೊಯ್ದೀನ್ ಸೇಟ್, ಸಿ.ಎಚ್.ಅಹಮದ್ ಬಾವ, ಮಜೀದ್ ಚಕಮಕ್ಕಿ, ಅಶ್ರಫ್ ಆಲ್ದೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net