ಬಸ್ ಕೊರತೆಯಿಂದ ಹೈರಾಣಾದ ಪ್ರಯಾಣಿಕರು

ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಮಂಗಳೂರು ಬಸ್ ಹತ್ತಲು ಸಿದ್ಧವಾಗಿರುವ ಪ್ರಯಾಣಿಕರ ದಂಡು.
ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಮಂಗಳೂರು ಬಸ್ ಹತ್ತಲು ಸಿದ್ಧವಾಗಿರುವ ಪ್ರಯಾಣಿಕರ ದಂಡು.
Published on
 ಮೂಡಿಗೆರೆ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮಂಗಳೂರು, ಧರ್ಮಸ್ಥಳ, ಉಡುಪಿ ಕಡೆಗೆ ಸಂಚರಿಸುವ ಬಸ್‌ಗಳು ಸರಿಯಾಗಿ ಸಂಚರಿಸದೆ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೂ ಕಾದು ಕುಳಿತು ನಂತರ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮನೆಯತ್ತ ವಾಪಸಾಗುವ ಪರಿಸ್ಥಿತಿ ಉಂಟಾಗಿದೆ.
ಈ ಹಿಂದೆ ಉತ್ತರ ಕರ್ನಾಟಕ ಭಾಗದಿಂದ ಮೂಡಿಗೆರೆ ಮೂಲಕ 10 ನಿಮಿಷಕ್ಕೊಂದು ಬಸ್ ಮಂಗಳೂರು, ಉಡುಪಿ, ಧರ್ಮಸ್ಥಳದತ್ತ ಸಂಚರಿಸುತ್ತಿದ್ದವು. ಈಗ ಆ ಬಸ್‌ಗಳೆಲ್ಲವೂ ಕಣ್ಮರೆಯಾಗಿವೆ. ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಹೆಚ್ಚಾಗಿ ಪ್ರಯಾಣದಲ್ಲಿ ತೊಡಗಿದ್ದಾರೆ. ಬಸ್‌ಗಳ ಸಂಚಾರ ಕಡಿಮೆಯಾಗಿದ್ದರಿಂದ ಸಂಚರಿಸುವ ಬಸ್‌ಗಳೆಲ್ಲವೂ ಪ್ರಯಾಣಿಕರಿಂದ ತುಂಬಿರುತ್ತವೆ. 22 ಕಿ.ಮೀ. ಚಾರ್ಮಾಡಿ ಘಾಟ್ ಪ್ರದೇಶವಿರುವ ಕಾರಣ ಬಸ್‌ನಲ್ಲಿ ನಿಂತು ಪ್ರಯಾಣ ಅಸಾಧ್ಯ. ಪ್ರಯಾಣಿಕರು ಅನಿವಾರ್ಯವಾಗಿ ನಿಂತು ಪ್ರಯಾಣಿಸಬೇಕಾಗಿದೆ. ಇದರಿಂದ ರೋಗಿಗಳು, ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಂಗಳೂರಿನ ವಿವಿಧ ಆಸ್ಪತ್ರೆ ಮತ್ತು ಮಣಿಪಾಲದ ಆಸ್ಪತ್ರೆಗೆ ಮೂಡಿಗೆರೆ ಭಾಗದ ರೋಗಿಗಳು ಹೆಚ್ಚಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ವಿದ್ಯಾರ್ಥಿಗಳನ್ನು ಕೂಡ ಪಾಲಕರು ಮಂಗಳೂರು, ಉಡುಪಿ ಜಿಲ್ಲೆಯ ಶಾಲೆ-ಕಾಲೇಜಿಗೆ ಹೆಚ್ಚಾಗಿ ಸೇರಿಸುತ್ತಾರೆ. ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಉಡುಪಿ ದೇವಸ್ಥಾನಗಳಿಗೆ ಮತ್ತು ಉಳ್ಳಾಲ, ಕಾಜೂರು ದರ್ಗಾಗಳಿಗೆ ಭಕ್ತಾದಿಗಳು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಮೂಡಿಗೆರೆಯಿಂದ ಮಂಗಳೂರು, ಉಡುಪಿ ಜಿಲ್ಲೆಗಳಿಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಮಾತ್ರವಲ್ಲದೆ ಪ್ರತಿ ಕೆಲಸಕ್ಕೂ ಕರಾವಳಿ ಜಿಲ್ಲೆಗಳನ್ನೇ ಮಲೆನಾಡಿಗರು ಅವಲಂಬಿಸುತ್ತಾರೆ. ಅನುಕೂಲಸ್ಥರು ಖಾಸಗಿ ವಾಹನದಲ್ಲಿ ತೆರಳಿದರೆ, ಮಧ್ಯಮ ಮತ್ತು ಬಡವರ್ಗದವರು ಕೆಎಸ್‌ಆರ್‌ಟಿಸಿ ಬಸ್ ಅವಲಂಬಿಸುವುದು ಅನಿವಾರ್ಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net