ಠಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ congress

 ಆಲ್ದೂರು ಠಾಣೆ ಮುಂದೆ ಜಮಾಯಿಸಿದ್ದ  ಕಾಂಗ್ರೆಸ್ ಕಾರ್ಯಕರ್ತರು.
ಆಲ್ದೂರು ಠಾಣೆ ಮುಂದೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು.
Published on
ಆಲ್ದೂರು: ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧವೇ ಪಕ್ಷದ ಇನ್ನೋರ್ವ ಕಾರ್ಯಕರ್ತ ದೂರು ದಾಖಲಿಸಿ ಅಂತಿಮವಾಗಿ ಆಲ್ದೂರು ಠಾಣೆಯಲ್ಲಿ ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥಗೊಂಡಿತು.
ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಭ್ರಷ್ಟಾಚಾರದ ಆರೋಪ ಮಾಡಿದ್ದು ಇದನ್ನು ಖಂಡಿಸಿ ಪಕ್ಷದ ಮತ್ತೊಬ್ಬ ಕಾರ್ಯಕರ್ತ ಆಲ್ದೂರು ಠಾಣೆಗೆ ದೂರು ನೀಡಿದ್ದಾರೆ. ಭಾನುವಾರ ಇಬ್ಬರೂ ಕಾರ್ಯಕರ್ತರ ಕಡೆಯವರು ಆಲ್ದೂರು ಠಾಣೆಯಲ್ಲಿ ಜಮಾಯಿಸಿ ವಾಗ್ದಾಳಿ ನಡೆಸಿದ್ದು, ಕೊನೆಗೆ ರಾಜಿ ಸಂಧಾನ ಮೂಲಕ ಸಮಸ್ಯೆ ಬಗೆಹರಿದಿದೆ.
ಮಾವಿನಗುಣಿ ಗ್ರಾಮದ ವಾಸಿ ಚೇತನ್ ಅವರು ಮಿಂಚೇರಿ ಗ್ರಾಮದ ವಾಸಿ ದೀಪಕ್ ಎಂಬುವವರ ಮೇಲೆ ಆಲ್ದೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ವಿರುದ್ಧ ದೀಪಕ್ ಅವರು ಗೋಣಿಬೀಡು ಗ್ರಾಮದಲ್ಲಿ ಸಭೆ ನಡೆಸಿ ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ಭಾನುವಾರ ದೀಪಕ್ ಅವರನ್ನು ಠಾಣೆಗೆ ಕರೆಸಲಾಗಿತ್ತು. ಚೇತನ್ ಹಾಗೂ ದೀಪಕ್ ಇಬ್ಬರೂ ಕಾರ್ಯಕರ್ತರ ಕಡೆಯವರು ಆಲ್ದೂರು ಠಾಣೆಯಲ್ಲಿ ಜಮಾಯಿಸಿದ್ದು ಜಗಳವಾಡಿಕೊಂಡರು. ಇದರಿಂದ ಕೆಲಕಾಲ ಠಾಣೆಯ ಒಳಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 
 ಆಲ್ದೂರು ವೃತ್ತ ನಿರೀಕ್ಷಕ ಸೋಮೇಗೌಡ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸೋಷಿಯಲ್ ಎಸ್‌ಎಂಎನ್‌ಸಿ, ಸಾಮಾಜಿಕ ಜಾಲತಾಣಗಳ ಮೇಲೆ 24 ಗಂಟೆ ನಿಗಾ ಇಟ್ಟಿದ್ದು ಸಮಾಜದ ಶಾಂತಿ ಕದಡುವವರ ವಿರುದ್ಧ ಠಾಣೆಯಲ್ಲಿ ಇಲಾಖೆೆಯಿಂದ ಸುಮೋಟೋ ಪ್ರಕರಣ ದಾಖಲು ಮಾಡಲಾಗುತ್ತದೆ. ಯಾವುದೇ ವ್ಯಕ್ತಿಯ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆಯಾಗುವಂತಹ, ಜಾತಿ, ಧರ್ಮಗಳ ನಡುವೆ  ಕೋಮುಗಲಭೆ ಉಂಟು ಮಾಡುವ ಹಾಗೂ ದೇಶದ ಐಕ್ಯತೆಗೆ ಧಕ್ಕೆ ತರುವ ಯಾವುದೇ ವಿಚಾರಗಳನ್ನು ವೈರಲ್ ಮಾಡಿದರೆ ಇಲಾಖೆಯಿಂದ ಸುಮೋಟೋ ಕೇಸು ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 
 ಆಲ್ದೂರು ಪಿಎಸ್‌ಐ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಮಹಮದ್ ಮುದಾಬೀರ್, ಹೋಬಳಿ ಅಧ್ಯಕ್ಷ ಪೂರ್ಣೇಶ್, ಸಿ.ಸುರೇಶ್,   ಅಂಬೇಡ್ಕರ್  ಹೋರಾಟ ವೇದಿಕೆ ಅಧ್ಯಕ್ಷ ನವರಾಜ್, ಗಣೇಶ್, ಹಾಲಪ್ಪ ಗೌಡ, ಪಕ್ಷದ ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net