ಶೃಂಗೇರಿ ತಾಲೂಕು ವಿದ್ಯಾರಣ್ಯಪುರ ವಿದ್ಯಾಶಂಕರ್ ಬಾಪಟ್ ಗದ್ದೆಯಲ್ಲಿ ಆರ್‌ಎಸ್‌ಎಸ್‌ನಿಂದ ಗ್ರಾಮೀಣ ಕ್ರೀಡೆ ಆಯೋಜಿಸಲಾಗಿತ್ತು. ಎಚ್.ಎಸ್.ವೇಣುಗೋಪಾಲ್, ರಾಘವೇಂದ್ರ ಹಂಚಲಿ, ವಿಶ್ವನಾಥ್, ಮೋಹನ್‌ರಾಜ್ ಇದ್ದರು.
ಶೃಂಗೇರಿ: ಕ್ರೀಡೆಗಳು ಮನಸ್ಸನ್ನು ಬೆಸೆಯುತ್ತವೆ. ನಮ್ಮೊಳಗೆ ಉತ್ತಮ ಬಾಂಧವ್ಯ ಬೆಸೆಯಲು ಕ್ರೀಡೆ ಸಹಕಾರಿ ಎಂದು ಆರ್‌ಎಸ್‌ಎಸ್ ಜಿಲ್ಲಾ ಕಾರ್ಯನಿರ್ವಾಹಕ ನೂತನ್ ಸೂರ್ಯ ಹೇಳಿದರು.
ತಾಲೂಕಿನ ವಿದ್ಯಾರಣ್ಯಪುರ ಶ್ರೀ ವಿದ್ಯಾಶಂಕರ್ ಬಾಪಟ್ ಅವರ ಗದ್ದೆಯಲ್ಲಿ ಆರ್‌ಎಸ್‌ಎಸ್‌ನಿಂದ ಸಾಂಕ್ ಕಾರ್ಯಕ್ರಮದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಕೆಸರುಗದ್ದೆ ಓಟ, ಹಗ್ಗಜಗ್ಗಾಟ ಕ್ರೀಡಾಕೂಟದಲ್ಲಿ ಮಾತನಾಡಿದರು.
ನೂರು ವರ್ಷಗಳ ಹಿಂದೆ ಹಿಂದೂಗಳನ್ನು ಸಂಘಟನೆ ಮಾಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಲ್ಲಿ ಹಿರಿಯ ಆರ್‌ಎಸ್‌ಎಸ್ ಸಂಘಟನಾಕಾರರು ಸ್ವದೇಶಿ ಕ್ರೀಡೆಗಳ ಮೂಲಕ ಹಿಂದೂಗಳಲ್ಲಿ ಒಗ್ಗಟ್ಟಿನ ಭಾವ ಬೆಳೆಸಿದರು. ಅದರಿಂದಾದ ಪರಿವರ್ತನೆಯಿಂದ ದೇಶದಲ್ಲಿ ಇಂದು ಸಾಕಷ್ಟು ಬದಲಾವಣೆಯಾಗಿದೆ. ಕಾಶ್ಮೀರದ ಮೂಲೆ ಮೂಲೆಗಳಲ್ಲಿ ತಿರಂಗ ಹಾರಿಸಲಾಗಿದೆ ಹಾಗೂ ಕೆಂಪುಕೋಟೆಯಲ್ಲಿ ವಂದೇ ಮಾತರಂ ಹಾಡಲಾಗಿದೆ ಎಂದರು.
ದೇಶ ಕಟ್ಟುವ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮುಂತಾದವರು ದೇಶಕ್ಕಾಗಿ ಹೋರಾಟ ಮಾಡಿದವರು. ಮಕ್ಕಳು ದೇಶಭಕ್ತಿ ಬೆಳೆಸಿಕೊಂಡು ಸಂಘಟನೆಯ ಬಲ ಹೆಚ್ಚಿಸಬೇಕು ಎಂದರು. 250ಕ್ಕೂ ಹೆಚ್ಚು ಜನ ಕ್ರೀಡೆಯಲ್ಲಿ ಪಾಲ್ಗೊಂಡರು.
ಸಂಘಟನೆ ಪದಾಧಿಕಾರಿಗಳಾದ ಸಂತೋಷ್ ಕೆರೆಮನೆ, ಆದರ್ಶ್ ಕಾಂಚೀನಗರ, ರವಿ ಸಂಜಯ್, ಕಿರಣ್, ಶಂಕರನಾರಾಯಣ್, ಟಿ.ಕೆ.ಪರಾಶರ, ಅನಿರುದ್ಧ ಉಪಸ್ಥಿತರಿದ್ದರು.