ಸರ್ಕಾರಿ ಶಾಲೆಗಳ ಉಳಿವಿಗೆ ದ್ವಿ ಭಾಷಾ ಶಿಕ್ಷಣ

 ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ದ್ವಿ ಭಾಷಾ ತರಗತಿ ಆರಂಭ ಸಮಾರಂಭವನ್ನು ಬಿಇಒ ಶಬಾನಾ ಅಂಜುಮ್ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಗದೀಶ್, ಕಣಿವೆ ವಿನಯ್, ಎನ್.ಎಂ.ಕಾಂತರಾಜ್,  ಲೋಕೇಶ್ ಇತರರಿದ್ದರು.
ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ದ್ವಿ ಭಾಷಾ ತರಗತಿ ಆರಂಭ ಸಮಾರಂಭವನ್ನು ಬಿಇಒ ಶಬಾನಾ ಅಂಜುಮ್ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಗದೀಶ್, ಕಣಿವೆ ವಿನಯ್, ಎನ್.ಎಂ.ಕಾಂತರಾಜ್, ಲೋಕೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಳೇ ವಿದ್ಯಾರ್ಥಿಗಳ ಸಂಘ
  • ಆಂಗ್ಲ ಮಾಧ್ಯಮದ ವ್ಯಾಮೋಹ
ಎನ್.ಆರ್.ಪುರ: ಸರ್ಕಾರಿ ಶಾಲೆಗಳ ಉಳಿವಿಗೆ ಗ್ರಾಮಸ್ಥರ ಹಾಗೂ ಪಾಲಕರ ಸಹಕಾರ ಅಗತ್ಯ ಎಂದು ಬಿಇಒ ಶಬಾನಾ ಅಂಜುಮ್ ಹೇಳಿದರು.
ಶೆಟ್ಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ನಡೆದ ದಾನಿಗಳಿಗೆ ಗೌರವ ಸಮರ್ಪಣೆ ಹಾಗೂ ದ್ವಿ ಭಾಷಾ ತರಗತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸರ್ಕಾರವೇ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಷ್ಟಸಾಧ್ಯ. ಆದ್ದರಿಂದಲೇ ಹಳೇ ವಿದ್ಯಾರ್ಥಿಗಳ ಸಂಘ, ಗ್ರಾಮಸ್ಥರು, ಪಾಲಕರು ಹಾಗೂ ದಾನಿಗಳ ನೆರವಿನಿಂದ ಸೌಕರ್ಯಗಳನ್ನು ಪಡೆಯಬಹುದಾಗಿದೆ ಎಂದರು. 
ಪಾಲಕರು ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮದ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು. 
ದಾನಿ ಕಣಿವೆ ವಿನಯ್ ಅವರು ಶಾಲೆಗೆ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿ ಮಾತನಾಡಿ, ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆದು ಹೊರ ದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ತಂದೆ, ತಾಯಿಯಂದಿರು ವೃದ್ಧಾಶ್ರಮದಲ್ಲಿ ಬದುಕುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸರ್ಕಾರಿ ಶಾಲೆಗಳ ಅವನತಿಯೇ ಮುಖ್ಯ ಕಾರಣ ಎಂದರು. 
ಈ ಹಿಂದೆ ಶಾಲೆಗಳಲ್ಲಿ ಶೇ.80ರಷ್ಟು ಸಂಸ್ಕಾರಯುತ ಶಿಕ್ಷಣವನ್ನು, ಶೇ.20ರಷ್ಟು ಶಿಕ್ಷಣ ನೀಡಲಾಗುತ್ತಿತ್ತು. ಇದರಿಂದ ಮಕ್ಕಳು ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕಲಿಯುತ್ತಿದ್ದರು. ಕುಟುಂಬದೊಂದಿಗೆ ಅನ್ಯೋನ್ಯವಾಗಿ ಬದುಕುತ್ತಿದ್ದರು. ಗುರು-ಹಿರಿಯರನ್ನು ಗೌರವಿಸುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಸಂಸ್ಕಾರದ ಶಿಕ್ಷಣವಿಲ್ಲದಂತಾಗಿದೆ ಎಂದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಎಂ.ಕಾಂತರಾಜ್ ಅವರು ಶಾಲೆಯ 1ನೇ ತರಗತಿಯ 10 ಮಕ್ಕಳಿಗೆ ತಲಾ 1 ಸಾವಿರ ರೂ.ನಂತೆ ಠೇವಣಿ ನೀಡಿ ಮಾತನಾಡಿ, ಪ್ರತಿಯೊಬ್ಬರೂ ದುಡಿದ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ಸಮಾಜಮುಖಿ ಕಾರ್ಯಗಳಿಗೆ ಬಳಕೆ ಮಾಡಬೇಕು. ಇದರಿಂದ ಆತ್ಮತೃಪ್ತಿ ದೊರಕುತ್ತದೆ. ಈ ಶಾಲೆಯಲ್ಲಿ ಓದಿದ ಮಕ್ಕಳು ದೊಡ್ಡ ಹುದ್ದೆಗಳಲ್ಲಿದ್ದಾರೆ. ಎಲ್ಲರೂ ಸಂಸ್ಕಾರವಂತರಾಗಿದ್ದಾರೆ ಎಂದರು.
ಸ್ಥಳೀಯರಾದ ಜೇಮ್ಸ್, ಎಲ್ದೋ, ಸಚಿನ್, ರವಿಚಂದ್ರ, ಸುಲೇಮಾನ್ ಮಕ್ಕಳಿಗೆ ತಟ್ಟೆ ಲೋಟಗಳನ್ನು ವಿತರಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಜಗದೀಶ್ 1ನೇ ತರಗತಿಗೆ ಮಕ್ಕಳಿಗೆ  ನೋಟ್‌ಬುಕ್, ಬ್ಯಾಗ್‌ಗಳನ್ನು ವಿತರಿಸಿದರು. ದಾನಿಗಳೆಲ್ಲರಿಗೂ ಶಾಲೆಯಿಂದ ಸನ್ಮಾನಿಸಲಾಯಿತು. 
ಎಸ್‌ಡಿಎಂಸಿ ಅಧ್ಯಕ್ಷ ಎಂ.ಜಗದೀಶ್, ರೋಟರಿ ಕಾರ್ಯದರ್ಶಿ ಕಟಗಳಲೆ ಲೋಕೇಶ್, ಗಾಂಧಿಗ್ರಾಮ ನಾಗರಾಜು, ಕೆ.ಸಿ.ನಾಗೇಶ್, ಎಂ.ಎಲ್.ಪ್ರಾಣೇಶ್, ವಾಣಿ ನರೇಂದ್ರ, ಅರುಣಕುಮಾರ್, ಗಾಯತ್ರಿ, ಪಿಡಿಒ ವಿಂದ್ಯಾ, ಮುಖ್ಯಶಿಕ್ಷಕಿ ಎ.ಜೆ.ಪೆನಿನಾ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net