ಶೃಂಗೇರಿ: ಭಗವದ್ಗೀತೆ Bhagavad Gita, ಸರ್ವ ತತ್ವಗಳ ಸಂಗಮ. ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗಗಳ ಮೂಲಕ ಆತ್ಮಸಾಕ್ಷಾತ್ಕಾರ ಹೊಂದುವುದು ಹಾಗೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕರ್ತವ್ಯ ನಿಭಾಯಿಸುವುದು ಗೀತೆಯ ಮೂಲಸಂದೇಶ ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಪ್ರೊ. ಚಂದ್ರಕಾಂತ್ ಹೇಳಿದರು.
ಮಾನಗಾರಿನಲ್ಲಿ ಗೀತಾ ಜಯಂತಿ ಪ್ರಯುಕ್ತ ಸಂಸ್ಕೃತ ಭಾರತೀ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಭಗವಂತನನ್ನು ನಾವು ಯಾವ ಭಾವದಿಂದ ನೋಡುತ್ತೇವೆಯೋ ಅದಕ್ಕೆ ಅನುಸಾರವಾಗಿ ಆತನ ಸ್ವರೂಪ ನಮಗೆ ತೋರಿಸುತ್ತಾನೆ ಎಂದರು.
ಭಗವದ್ಗೀತೆಯನ್ನು ಬೇರೆ ಬೇರೆ ಹಿನ್ನೆಲೆಯುಳ್ಳ ವ್ಯಕ್ತಿಗಳು ನೋಡಿದಾಗ ನಮಗೆ ವೈವಿಧ್ಯಮಯ ಮಾಹಿತಿ ಲಭ್ಯವಾಗುತ್ತದೆ. ಆಧ್ಯಾತ್ಮಿಕ ಮೌಲ್ಯದ ದೃಷ್ಟಿಕೋನದಿಂದ ನೋಡಿದಾಗ ವೇದಾಂತದ ಸಾರ ತೆರೆದಿಡುತ್ತದೆ. ಎಲ್ಲ ದಾರ್ಶನಿಕರೂ ಗೀತೆಯ ಕುರಿತು ವ್ಯಾಖ್ಯಾನಗಳನ್ನು ಬರೆದು ಜನಸಾಮಾನ್ಯರಿಗೆ ಉನ್ನತ ಮಾಹಿತಿ ನೀಡಿದ್ದಾರೆ. ಮನಸ್ಸನ್ನು ನಿಗ್ರಹಿಸುವ ಉಪಾಯಗಳನ್ನು ಮನೋವಿಜ್ಞಾನಿ ಗೀತೆಯಿಂದ ಕಂಡುಕೊಳ್ಳಬಹುದು. ಅಲ್ಬರ್ಟ್ ಐನ್‌ಸ್ಟೀನ್ ಗೀತೆಯಿಂದ ಪ್ರೇರಣೆಗೊಂಡ ವಿಜ್ಞಾನಿಯಾಗಿದ್ದು ಪ್ರಬಂಧನ ಶಾಸ್ತ್ರಕ್ಕೆ ಸಂಬಂಧಪಟ್ಟ ಅನೇಕ ತತ್ವಗಳು ಭಗವದ್ಗೀತೆಯಲ್ಲಿದೆ ಎಂದರು.
ಸಂಸ್ಕೃತ ಭಾರತೀ ಜಿಲ್ಲಾ ಸಂಯೋಜಕಿ ರೋಹಿಣಿ ಗಿರಿಧರ್ ಆಚಾರ್ಯ, ಸಂಸ್ಕೃತಭಾರತೀ ನಗರ ಸಂಯೋಜಕಿ ವಿದ್ವತ್ಸೇನಾ,ಪದಾಧಿಕಾರಿ ಶ್ರೀಜಾ ಉದನೇಶ ಇದ್ದರು.