ಜಾತ್ರಾ ಮಹೋತ್ಸವದಲ್ಲಿ ಅವಘಡ

ಹಳೇಪೇಟೆಯಲ್ಲಿ ನಿಂತ ಶ್ರೀ ಅಂತರಘಟ್ಟಮ್ಮದೇವಿ ರಥಕ್ಕೆ ಪಾನಕದ ಬಂಡಿ ಗುದ್ದಿರುವುದು.
ಹಳೇಪೇಟೆಯಲ್ಲಿ ನಿಂತ ಶ್ರೀ ಅಂತರಘಟ್ಟಮ್ಮದೇವಿ ರಥಕ್ಕೆ ಪಾನಕದ ಬಂಡಿ ಗುದ್ದಿರುವುದು.
Published on
ಬೀರೂರು: ಕರಗಲ್ ಬೀದಿಯಲ್ಲಿರುವ ಅಂತರಘಟ್ಟಮ್ಮ ದೇವಿ ರಥೋತ್ಸವ ಅಂಗವಾಗಿ ನಡೆದ ಪಾನಕದ ಎತ್ತಿನ ಬಂಡಿಗಳ ಓಟದಲ್ಲಿ ವೃದ್ಧ ಹಾಗೂ ಎರಡು ಎತ್ತುಗಳಿಗೆ ಗಾಯಗಳಾಗಿವೆ. 
ಜಾತ್ರಾ ಮಹೋತ್ಸವದ ರಥ ಹಳೇಪೇಟೆಗೆ ಆಗಮಿಸುತ್ತಿದ್ದಂತೆ ವೀರಾಂಜನೇಯ ಸ್ವಾಮಿ ದೇವಾಲಯದ ಬಳಿಯಲ್ಲಿ ಸರಿದು ನಿಲ್ಲುತ್ತದೆ. ನಂತರ ಪಾನಕದ ಎತ್ತಿನ ಬಂಡಿಗಳ ಓಟ ಆರಂಭವಾಗುತ್ತದೆ. ಪ್ರಥಮವಾಗಿ ಓಟ ಆರಂಭಿಸಿದ ಬಂಡಿ ವೇಗವಾಗಿ ಬಂದು ವೃದ್ಧನಿಗೆ ತಗುಲಿದಾಗ ವೃದ್ಧ ಬಿದ್ದು ಬಂಡಿಯ ಚಕ್ರ ಕಾಲಿನ ಮೇಲೆ ಹರಿದಿದೆ. ಕೂಡಲೇ ವೃದ್ಧನನ್ನು ಆಂಬುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆಯ ನಂತರ ಶಿವಮೊಗ್ಗಕ್ಕೆ ಕಳುಹಿಸಲಾಯಿತು. ಹೀಗೆಯೇ ಒಂದಾದ ನಂತರ ಮತ್ತೊಂದರಂತೆ ಬರುತ್ತಿದ್ದ ಬಂಡಿಗಳು ವೇಗವಾಗಿ ಬಂದು ರಥಕ್ಕೆ ನೊಗವು ತಗುಲಿ ಎತ್ತಿಗೆ ಪೆಟ್ಟಾಗಿದೆ. ನಂತರ ಮತ್ತೊಂದು ಬಂಡಿಯೂ ವೇಗವಾಗಿ ಆಗಮಿಸಿ ಹಳೇಪೇಟೆಯ ಅಂತ್ಯದಲ್ಲಿರುವ ಶಿವಾಜಿ ಪ್ರತಿಮೆಯ ಕಟ್ಟೆಗೆ ಗುದ್ದಿದ ಪರಿಣಾಮ ಎತ್ತಿನ ಕೋಡು ಮುರಿದು ಎತ್ತು ಅಸ್ವಸ್ಥಗೊಂಡಿತು. ಜನರನ್ನು ನಿಯಂತ್ರಿಸಲು ಪ್ರಯತ್ನ ಮಾಡುತ್ತಿದ್ದ ಪೊಲೀಸರಿಗೂ ಕ್ಯಾರೇ ಎನ್ನದ ಜನತೆ ತಡೆಗೋಡೆಯನ್ನು ದಾಟಿ ರಸ್ತೆಗೆ ಆಗಮಿಸಿದರು. ಶಿಳ್ಳೆ ಮತ್ತು ಕೇಕೆಯ ನಡುವೆ ಎತ್ತುಗಳು ಗಾಬರಿಗೊಂಡು ಮನಸ್ಸೋಇಚ್ಛೆ ಓಡಿ ಅವಘಡಗಳು ಸಂಭವಿಸಿವೆ. ಆದರೂ ಜನರು ರಾಸುಗಳ ಮೇಲಿನ ಹುಚ್ಚು ಕಡಿಮೆಯಾಗದೆ ಜಾತ್ರಾ ಮಹೋತ್ಸವದಲ್ಲಿ ಎತ್ತುಗಳ ಓಟವನ್ನು ಪೂರೈಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net