ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಂಡರೆ ಶಾಂತಿ ಮತ್ತು ನೆಮ್ಮದಿಯ ಬದುಕು ಸಾಧ್ಯ. ಸ್ಥಿಮಿತತೆಗೆ ಜ್ಞಾನ ಪೂರಕ. ನಮ್ಮನ್ನು ನಾವು ಅರಿತುಕೊಳ್ಳುವುದು, ಅಂಕು ಡೊಂಕುಗಳನ್ನು ತಿದ್ದಿಕೊಳ್ಳುವುದು ನಿಜವಾದ ಜ್ಞಾನ. ಮತ್ತೊಬ್ಬರ ತಪ್ಪನ್ನು ಎತ್ತಿಎಣಿಸುವ ಬದಲು ನಮ್ಮ ತಪ್ಪುಗಳನ್ನು ಅರಿತು ಸರಿಪಡಿಸಿಕೊಳ್ಳಲು ಪ್ರಯತ್ನಿಸುವುದೇ ನಿಜವಾದ ಪೂಜೆ ಎಂದು ಅರ್ಥೈಸಿದ ಲೀಲಾ, ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ಸಮಚಿತ್ತದಿಂದ ಬದುಕುವುದರಲ್ಲಿ ಸಾರ್ಥಕತೆ ಇದೆ. ಶರಣರು ಇದನ್ನೆ ಅನುಭಾವದ ನುಡಿಗಟ್ಟಿನಲ್ಲಿ ಸಾರಿದ್ದಾರೆಂದು ವಚನಗಳನ್ನು ರಾಗಬದ್ಧವಾಗಿ ಪ್ರಸ್ತುತ ಪಡಿಸಿದರು.
ಆದರ್ಶ ಮತ್ತು ಸಂಸ್ಕಾರ ಬಹುಳ ಮುಖ್ಯ. ನಾವು ಮೊದಲು ಆದರ್ಶವಂತರಾಗಿ ಬದುಕಿ ನಂತರ ಇತರರಿಗೆ ಹೇಳಬೇಕು. ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಜ್ಜನರ ಸಂಗ ಹೆಜ್ಜೇನು ಸವಿದಂತೆ. ಡಿವಿಜಿ ಹೇಳಿರುವಂತೆ ಯಾವುದೂ ಶಾಶ್ವತವಲ್ಲ. ಅರಿವು-ನೆನಹು ಎಲ್ಲರಲ್ಲೂ ಇರಬೇಕು. ನಾವು ಮಾಡಿದ ಉಪಕಾರ-ಬೇರೆವರಿಂದಾದ ಅಪಮಾನ-ನಿಂದನೆ ಮರೆತು ಒಳಿತನ್ನಷ್ಟೇ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದವರು ನುಡಿದರು.
ಸತ್ಯ-ಶುದ್ಧ ಕಾಯಕ, ನಡವಳಿಕೆ, ನಂಬಿಕೆ, ನಮ್ಮದಾಗಬೇಕು. ಐಸ್ಟೀನ್ ಹೇಳುವಂತೆ ಏನೇ ಸಾಧನೆ ಮಾಡಿದರೂ ಅದು ನನ್ನದಲ್ಲ. ಭಗವಂತನ ಚೈತನ್ಯದಿಂದ ಎಂದ ಅವರು, ೮೪ಲಕ್ಷ ಜೀವರಾಶಿ ದಾಟಿಬಂದ ಮಾನವಜನ್ಮ ಶ್ರೇಷ್ಠವಾದದ್ದು ಅದನ್ನು ಅರಿತು ಸಾರ್ಥಕಪಡಿಸಿಕೊಳ್ಳುವತ್ತ ಪ್ರಯತ್ನಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಹಿತಮಿತವಾದ ಭೋಜನ, ಲಘುವ್ಯಾಯಾಮ, ಪುಸ್ತಕಗಳ ಅಧ್ಯಯನದಂತಹ ಸದ್ಗುಣಗಳನ್ನು ಅಳವಡಿಸಿಕೊಳ್ಳಬೇಕು. ಮೊಬೈಲ್ ಮತ್ತು ಟಿವಿ ಗೀಳಿಗೆ ಒಳಗಾಗದೆ ಓದುವಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವುದು ಸ್ವಾಸ್ಥö್ಯಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಲೀಲಾ ನುಡಿದರು.
ಅಕ್ಕಮಹಾದೇವಿ ಮಹಿಳಾಸಂಘದ ಅಧ್ಯಕ್ಷೆ ಆಶಾಮಲ್ಲೇಶ್ ಅಧ್ಯಕ್ಷತೆವಹಿಸಿ ಮಾತನಾಡಿ ಇಂದು ಕಾರಹುಣ್ಣಿಮೆ. ರೈತಾಪಿ ಜನರು ಹೊಲದಲ್ಲಿ ಭೂತಾಯಿಯನ್ನು ಪೂಜಿಸಿ ಒಳ್ಳೆ ಮಳೆ-ಬೆಳೆಯನ್ನು ಕರುಣಿಸು ಎಂದು ಪ್ರಾರ್ಥಿಸುವ ಹಬ್ಬವಾಗಿದೆ. ಹಸಿರೇ ಉಸಿರು ಪ್ರತಿಯೊಬ್ಬರೂ ಕನಿಷ್ಠ ಐದು ಗಿಡ ಮರಗಳನ್ನು ನೆಡುವುದರೊಂದಿಗೆ ಪರಿಸರ ಕಾಳಜಿ ವಹಿಸಬೇಕೆಂದರು.
ಪ್ರತಿವರ್ಷದಂತೆ ಈ ಬಾರಿಯೂ ಎಸ್‌ಎಸ್‌ಎಲ್ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.೯೨ ಅಂಕಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾಪುರಸ್ಕಾರ ಜುಲೈ ೨೯ರಂದು ನಡೆಯುವ ಸಂಘದ ವಾರ್ಷಿಕೋತ್ಸವದಲ್ಲಿ ನೀಡುತ್ತಿದ್ದು, ಕರ‍್ಯಕಾರಿ ಸಮಿತಿ ಮತ್ತು ಸದಸ್ಯರ ಸಹಕಾರ-ಸಲಹೆ ಅಗತ್ಯವೆಂದ ಆಶಾ, ಜುಲೈ ೨೮ರಂದು ಅಂಗಾಂಗ ದಾನ ನೊಂದಾಣೆ ಶಿಬಿರ ಹಾಗೂ ಕಾರ್ಯಕ್ರಮ ನಿರೂಪಣೆ ಮಾಡುವ ಬಗ್ಗೆ ಕಾರ್ಯಾಗಾರ ಆಯೋಜಿಸಿದ್ದು ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸಂಘಘಟನಾ ಕಾರ್ಯದರ್ಶಿ ಮಂಜುಳಮ್ಮ ಮಾತನಾಡಿ, ತಂಡದ ಸದಸ್ಯರ ಸಹಕಾರದಿಂದ ಕಾರ್ಯಕ್ರಮ ಚೆನ್ನಾಗಿ ಮೂಡಿಬಂದಿದೆ. ಸಹಭಾಗಿತ್ವ ವಿಶ್ವಾಸ ಇದ್ದರೆ ಹೆಚ್ಚಿನ ಸೇವಾಕಾರ್ಯ ಮಾಡಲು ಸಾಧ್ಯ ಎಂದರು.
ಉಪಾಧ್ಯಕ್ಷೆ ಕುಸುಮಾ ರಾಜಶೇಖರ್, ಕಾರ್ಯದರ್ಶಿ ಆಶಾಹೇಮಂತ್, ಖಜಾಂಚಿ ಪಾರ್ವತಿ ಬಸವರಾಜು, ಸಹಕಾರ್ಯದರ್ಶಿ ಮಧುಮತಿ ವೇದಿಕೆಯಲ್ಲಿದ್ದರು. ವಿವಿಧ ಆಟೋಟಸ್ಪರ್ಧಾ ವಿಜೇತರಿಗೆ ಮಂಜುಳಮ್ಮ ಬಹುಮಾನ ವಿತರಿಸಿದರು. ಜಾನಪದ ನೃತ್ಯ ಸೇದಂತೆ ಸಾಂಸ್ಕೃತಿಕ ಕರ‍್ಯಕ್ರಮ ಆಕರ್ಷಕವಾಗಿತ್ತು.
ಸದಸ್ಯರಾದ ರೇಣುಕಾಜಯಣ್ಣ ಸ್ವಾಗತಿಸಿದ್ದು, ಮೋಹನಾಶಿವಪ್ರಕಾಶ್ ವಂದಿಸಿದರು.