843 ಬಿಪಿಎಲ್ ಪಡಿತರ ಚೀಟಿ ರದ್ದು

ಮೂಡಿಗೆರೆಯಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಬಿ.ಎಸ್.ಜಯರಾಮ್, ತಾಪಂ ಇಒ ದಯಾವತಿ ಇದ್ದರು.
ಮೂಡಿಗೆರೆಯಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಬಿ.ಎಸ್.ಜಯರಾಮ್, ತಾಪಂ ಇಒ ದಯಾವತಿ ಇದ್ದರು.
Published on
ಮೂಡಿಗೆರೆ: ತಾಲೂಕಿನಲ್ಲಿ ಒಟ್ಟು 843 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಪಿಎಲ್ ಕಾರ್ಡಿಗೆ ವರ್ಗಾಯಿಸಲಾಗಿದೆ ಎಂದು ಆಹಾರ ಇಲಾಖೆಯ ಶಿರಸ್ತೇದಾರ್ ಇಂದ್ರೇಶ್ ತಿಳಿಸಿದರು. 
 ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅನರ್ಹಗೊಂಡಿರುವ ಒಟ್ಟು 843 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಿ ಎಪಿಎಲ್ ಪಡಿತರ ಚೀಟಿಯನ್ನಾಗಿ ಮಾರ್ಪಾಡು ಮಾಡಲಾಗಿದೆ. ತಾಲೂಕಿನಲ್ಲಿ ಸದ್ಯ 18,212 ಪಡಿತರ ಚೀಟಿಗಳಿದ್ದು ಇ-ಕೆವೈಸಿ ಕಡ್ಡಾಯವಾಗಿದೆ. ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿಗೆ ಬಂದಿದ್ದಾರೆ. ಹೆಚ್ಚುವರಿ ಪಡಿತರಕ್ಕೆ ಬೇಡಿಕೆ ಸಲ್ಲಿಸಲಾಗುತ್ತಿದೆ. ಪ್ರತಿ ತಿಂಗಳು 20ರ ಒಳಗಾಗಿ ಪಡಿತರಕ್ಕೆ ಬೇಡಿಕೆ ಸಲ್ಲಿಸಬೇಕು. ನಂತರ ಬೇಡಿಕೆ ಸಲ್ಲಿಸಿದಲ್ಲಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. 
 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಹೇಶ್ ಭಜಂತ್ರಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 29,032 ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಅದರಲ್ಲಿ 28,654 ಫಲಾನುಭವಿಗಳಿಗೆ ಯೋಜನೆ ತಲುಪಿದೆ. ಉಳಿದ ಫಲಾನುಭವಿಗಳು ಆದಾಯ ತೆರಿಗೆ ಪಾವತಿ ಮತ್ತಿತರ ಕಾರಣಗಳಿಂದ ಯೋಜನೆಯಿಂದ ಹೊರಗುಳಿದಿದ್ದಾರೆ ಎಂದು ಮಾಹಿತಿ ನೀಡಿದರು. 
 ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಜನವರಿಯಿಂದ ಇದುವರೆಗೆ 1,75,173 ಮಹಿಳೆಯರು ಮೂಡಿಗೆರೆ ಸಾರಿಗೆ ಘಟಕದ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ. ಇದಕ್ಕಾಗಿ ಸರ್ಕಾರದಿಂದ 88.84 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಕೂವೆ, ನಿಡುವಾಳೆ ಭಾಗದಿಂದ ಕೊಟ್ಟಿಗೆಹಾರ ಮಾರ್ಗವಾಗಿ ಶೃಂಗೇರಿಗೆ ಬಸ್ ಸಂಪರ್ಕ ಕಲ್ಪಿಸುವಂತೆ ಪ್ರಸ್ತಾಪ ಬಂದಿದೆ. ಆ ಪ್ರಸ್ತಾಪವನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದಾಗ, ಬಸ್‌ಗಾಗಿ ಸಾರ್ವಜನಿಕರಿಂದ ಅಹವಾಲು ಬಂದರೆ ಅದನ್ನು ನಿರ್ಲಕ್ಷಿಸದೆ ಕೂಡಲೆ ಇತ್ಯರ್ಥಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರದ ಅವ್ಯವಸ್ಥೆ ಬಗ್ಗೆ ಅನೇಕ ದೂರುಗಳಿವೆ. ಮಂಗಳೂರು ಭಾಗಕ್ಕೆ ಮೂಡಿಗೆರೆಯಿಂದ ಬಸ್‌ಗಳಿಲ್ಲ ಎಂಬ ದೂರಗಳಿವೆ. ಇವೆಲ್ಲವನ್ನೂ ಕೂಡಲೆ ಪರಿಗಣಿಸಿ ಆ ಮಾರ್ಗದಲ್ಲಿ ಹೆಚ್ಚಿನ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಮ್ ಸೂಚಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್.ಜಯರಾಮ್, ತಾಪಂ ಇಒ ದಯಾವತಿ, ಸಮಿತಿ ಸದಸ್ಯರಾದ ಹೊಸಕೆರೆ ರಮೇಶ್, ಗುರುವಪ್ಪ, ಶ್ರೀನಿವಾಸ್, ನವೀನ್, ಭರತ್, ಬಿ.ಕೆ.ಜಯಮ್ಮ, ಅರುಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net