ಮೂರನೇ ಅಂತಸ್ತಿನ ಕಟ್ಟಡದಿಂದ ಇದ್ದಕ್ಕಿದ್ದಂತೆ ಬಿದ್ದು ಕಾರ್ಮಿಕ ಸಾವು

ಕಾರ್ಮಿಕ ಶ್ರೀನಿವಾಸ್ ಬಿದ್ದ ಕಟ್ಟಡದ ಜಾಗ.
ಕಾರ್ಮಿಕ ಶ್ರೀನಿವಾಸ್ ಬಿದ್ದ ಕಟ್ಟಡದ ಜಾಗ.
Published on

ಚಿಕ್ಕಬಳ್ಳಾಪುರ: ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಮೇಲಿಂದ ಕೆಳಕ್ಕೆ ಬಿದ್ದು ಗಾರೆ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.
ಚಿಕ್ಕಬಳ್ಳಾಪುರ ತಾಲೂಕಿನ ಹನುಮಂತಪುರದ ಶ್ರೀನಿವಾಸ್ (45) ಮೃತ. ನಗರಸಭೆ ಸಮೀಪ ನೂತನವಾಗಿ ಕಟ್ಟಡವನ್ನು ನಿರ್ಮಿಸಲಾಗುತ್ತಿತ್ತು. ಇದರ ನಡುವೆ ಶ್ರೀನಿವಾಸ್ ಕಾಂಕ್ರೀಟ್ ಗೋಡೆಗೆ ನೀರು ಹಾಕಲು ಹೋಗಿದ್ದರು. ಇದೇ ವೇಳೆ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮೇಲಿಂದ ಬೀಳುತ್ತಿದ್ದಂತೆ ತಲೆಗೆ ಬಿದ್ದ ಗಂಭೀರ ಪೆಟ್ಟಿನಿಂದ ಗಾಯಾಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

*ಕುಟುಂಬಸ್ಥರ ರೋಧನ*
ಹಲವು ವರ್ಷಗಳಿಂದ ಗಾರೆ ಕೆಲಸವನ್ನು ನೆಚ್ಚಿಕೊಂಡು ಶ್ರೀನಿವಾಸ್ ಜೀವನ ನಡೆಸುತ್ತಿದ್ದರು. ಸಾಲ ಸೋಲ ಮಾಡಿ ಇಬ್ಬರು ಮಕ್ಕಳನ್ನು ಇಂಜಿನಿಯರಿಂಗ್ ಮಾಡಿಸುತ್ತಿದ್ದರು. ತಂದೆಯ ನಿಧನದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮಕ್ಕಳು, ಕುಟುಂಬಸ್ಥರು ರೋಧಿಸುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಕುಟುಂಬವು ಸಾಲದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ನಮಗೆ ಯಾರು ದಿಕ್ಕು ಎಂದು ಅಳಲು ತೋಡಿಕೊಂಡರು.

*ರಾಜೀ ಸಂಧಾನಕ್ಕೆ ಯತ್ನ*
ಕಳೆದ ಮೂರು ದಿನಗಳಿಂದಲೂ ಕೆಲಸ  ಸ್ಥಗಿತಗೊಂಡಿದ್ದು ಆತ ಎಂದಿನಂತೆ ಬಂದು ಕಟ್ಟಡದ ಗೋಡೆಗೆ ನೀರು ಹಾಕಲು ಹೋಗಿ ಮೃತಪಟ್ಟಿದ್ದಾನೆ. ಆತನಿಗೆ ಕೆಲಸಕ್ಕೆ ಬರಲು ಹೇಳಿರಲಿಲ್ಲ. ಆದರೆ, ಹಲವು ವರ್ಷಗಳಿಂದ ಗಾರೆ ಕೆಲಸ ಮಾಡಿಕೊಂಡಿರುತ್ತಿದ್ದ ಎಂಬುದಾಗಿ ಕಟ್ಟಡ ನಿರ್ಮಾಣದ ಮೇಸ್ತ್ರಿ ಲಕ್ಷ್ಮೀ ನಾರಾಯಣ್ ಮಾಹಿತಿ ನೀಡಿದ್ದಾರೆ. ಇದರ ನಡುವೆ ಕುಟುಂಬಸ್ಥರು, ಕಟ್ಟಡ ಮಾಲೀಕರು ಹಾಗೂ ಮೇಸ್ತ್ರಿ ಸೇರಿ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net