ಮಕ್ಕಳ ರಕ್ಷಣಾ ಆಯೋಗದ ಎದುರು ಅಳಲು ತೋಡಿಕೊಂಡ ವಿದ್ಯಾರ್ಥಿಗಳು

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಕೈಗೊಂಡಿದ್ದ ಸಭೆಯಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸಿದ ವಿದ್ಯಾರ್ಥಿಗಳು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಕೈಗೊಂಡಿದ್ದ ಸಭೆಯಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸಿದ ವಿದ್ಯಾರ್ಥಿಗಳು.
Published on
ಚಿಕ್ಕಬಳ್ಳಾಪುರ: ಶಾಲೆಯ ಕಾಂಪೌಂಡ್‌ ದಾಟಿಕೊಂಡು ಬಂದು ಧೂಮಪಾನ, ಮದ್ಯಪಾನದಲ್ಲಿ ತೊಡಗುವ ಸ್ಥಳೀಯ ಕಿಡಿಗೇಡಿಗಳು, ಬಸ್ಸಿನಲ್ಲಿ ತುಂಬಾ ಪ್ರಯಾಣಿಕರ ದಟ್ಟಣೆಯಿಂದ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ತೊಂದರೆ, ಬಿಸಿಯೂಟ ತಿಂದ ಮೇಲೆ ಕೈ ತೊಳೆಯಲು ಬೇರೆ ಶಾಲೆಗೆ ಹೋಗಬೇಕು.
ಇವು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್‌ ಕೋಸಂಬೆ ಅಧ್ಯಕ್ಷತೆಯ ಸಭೆಯಲ್ಲಿ ಮಕ್ಕಳು ಹೇಳಿಕೊಂಡ ದೂರುಗಳು. ಶೈಕ್ಷಣಿಕವಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿರ್ಭಯವಾಗಿ ಗಮನ ಸೆಳೆದರು. ತ್ವರಿತ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಕ್ಕಳ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ
ಅಧ್ಯಕ್ಷ ಕೋಸಂಬೆ, ಮಕ್ಕಳ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಸವಲತ್ತುಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಶಾಲೆಗಳಲ್ಲಿ 1,59,892 ವಿದ್ಯಾರ್ಥಿಗಳು ದಾಖಲಾಗಿದ್ದು ಈ ಪೈಕಿ 41,939 ಮಕ್ಕಳ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಅಪ್ಲೋಡ್ ಮಾಡುವ ಕಾರ್ಯ ಈ ವರೆಗೆ ಪೂರ್ಣಗೊಳಿಸಿಲ್ಲ. ಇದರಿಂದ ಮಕ್ಕಳಿಗೆ ಸರ್ಕಾರದ ವಿದ್ಯಾರ್ಥಿ ವೇತನದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸಾಕಷ್ಟು ಮಕ್ಕಳಿಗೆ ಜನನ ಪ್ರಮಾಣ ಪತ್ರವೇ ಇಲ್ಲ. ಇದಕ್ಕೆ ಮುಂಬರುವ 2 ವಾರದೊಳಗೆ ಜಿಲ್ಲಾಡಳಿತವು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸಹಕಾರದೊಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು ಎಂದು ಸೂಚಿಸಿದರು.
ಎಪಿಎಎಆರ್‌ ತಂತ್ರಾಂಶದಲ್ಲಿ ಶೇ 60.57 ಮಕ್ಕಳ ಅಂಕಿ ಅಂಶಗಳನ್ನು ಮಾತ್ರ ದಾಖಲಿಸಲಾಗಿದೆ. ಇದರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net