ಮೂರ್ಛೆ ಹೋಗುವ ತನಕ ಶಾಲೆಯಲ್ಲಿ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿತ

ಅಸ್ವಸ್ಥಗೊಂಡ ವಿದ್ಯಾರ್ಥಿ
ಅಸ್ವಸ್ಥಗೊಂಡ ವಿದ್ಯಾರ್ಥಿ
Published on
ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಶಾಲಾ ಶಿಕ್ಷಕರು ಹಿಗ್ಗಾಮುಗ್ಗಾ ಥಳಿಸಿದ್ದರಿಂದ ವಿದ್ಯಾರ್ಥಿ ಮೂರ್ಛೆ ಹೋದ ಘಟನೆಯು ಗೌರಿಬಿದನೂರು ನಗರದ ವಿದ್ಯಾ ನಿಧಿ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಸುಶಾಂತ್ ಪಕ್ಕದ ವಿದ್ಯಾರ್ಥಿಯ ಪುಸ್ತಕದಲ್ಲಿ ಹಾಳೆಯನ್ನು ಹರಿದಿದ್ದಾನೆ ಎನ್ನುವ ಕಾರಣಕ್ಕೆ ಆತನನ್ನು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಲಾಗಿದೆ. ಬಳಿಕ ಐದಾರು ಮಂದಿ ಶಿಕ್ಷಕರು ಒಬ್ಬರ ನಂತರ ಒಬ್ಬರು ಥಳಿಸಿದ್ದಾರೆ. ನಾನು ಯಾವ ಹಾಳೆಯನ್ನು ಹರಿದಿಲ್ಲ ಎಂದು ವಿದ್ಯಾರ್ಥಿ ಎಷ್ಟೇ ಹೇಳಿದರೂ ಕೇಳದ ಶಿಕ್ಷಕರು ವಿದ್ಯಾರ್ಥಿ ಮೂರ್ಛೆ ಹೋಗುವ ಹಂತಕ್ಕೆ ಹೊಡೆದಿದ್ದಾರೆ. ವಿದ್ಯಾರ್ಥಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿದ ಬಳಿಕ ಶಾಲಾ ಆಡಳಿತ ಮಂಡಳಿಯು ಶಾಲಾ ವಾಹನದಲ್ಲಿ ವಿದ್ಯಾರ್ಥಿಯನ್ನು ಗೌರಿಬಿದನೂರು ನಗರದ ಮಾನಸ ಆಸ್ಪತ್ರೆಗೆ ಕರೆದೋಯ್ದು ದಾಖಲಿಸಿದ್ದಾರೆ.
ನನ್ನ ಪಕ್ಕದ ವಿದ್ಯಾರ್ಥಿಯ ಪುಸ್ತಕದಲ್ಲಿ ಹೋಮ್ ವರ್ಕ್ ನೋಡಿಕೊಂಡು ಬರೆಯುತ್ತಿದ್ದಾಗ ಬೇರೆ ವಿದ್ಯಾರ್ಥಿ ನನ್ನ ಪುಸ್ತಕದಲ್ಲಿ ಹಾಳೆಯನ್ನು ಹರಿಸಿದ್ದಾನೆ ಎನ್ನುವ ಕಾರಣಕ್ಕೆ ಕೊಠಡಿಯಲ್ಲಿ ಕೂಡಿ ಹಾಕಿ, ಶಿಕ್ಷಕರಾದ ದೇವರಾಜ್, ವನಜಾಕ್ಷಿ ಸೇರಿದಂತೆ 5-6 ಶಿಕ್ಷಕರು ಮನಬಂದಂತೆ ಥಳಿಸಿದರು. ನಾನು ಹರಿದಿಲ್ಲ ಎಂದು ಎಷ್ಟೇ ಹೇಳಿದರೂ ಕೇಳಲಿಲ್ಲ. ನಾನು ಭಯದಿಂದ ಬಿದ್ದು ಹೋದೆ, ನಂತರ ನಾನು ಎದ್ದು ನೋಡಿದಾಗ ಆಸ್ಪತ್ರೆಯಲ್ಲಿದ್ದೆ ಎಂದು ಚಿಕಿತ್ಸೆಯ ಬಳಿಕ ವಿದ್ಯಾರ್ಥಿ ಸುಶಾಂತ್ ತಿಳಿಸಿದ್ದಾನೆ.
ಶಿಕ್ಷಕರು ನನ್ನ ಮಗನಿಗೆ ಚೆನ್ನಾಗಿ ಥಳಿಸಿದ್ದಾರೆ. ಇದರಿಂದ ಗಾಬರಿಗೊಂಡು ಮೂರ್ಛೆ ಹೋಗಿದ್ದಾನೆ. ಶಾಲೆಯಲ್ಲಿನ ಸಿ.ಸಿಕ್ಯಾಮೆರಾದಲ್ಲಿನ ವಿಡಿಯೋವನ್ನು ವೀಕ್ಷಿಸಿದ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ವಿದ್ಯಾರ್ಥಿ ತಾಯಿ ಕವಿತಾ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿ, ಸಂಬಂಧಿತರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಶಾಲೆಯವರು ಸಿ.ಸಿ ಕ್ಯಾಮೆರಾ ದೃಶ್ಯಾವಳಿ ತಿರುಚಿದಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net