

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಡಿ.21 ರಿಂದ ಡಿ.24 ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾಕರಣ ಅಭಿಯಾನಕ್ಕೆ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಗತ್ಯ ಸಿದ್ಧತೆ ಕೈಗೊಂಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಐದು ವರ್ಷದೊಳಗಿನ 1,11,212 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಕಾರದೊಂದಿಗೆ ಅಭಿಯಾನವನ್ನು ಯಶಸ್ವಿಗೊಳಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಯೋಜಿಸಲಾಗಿದೆ.
*ಲಸಿಕಾ ಅಭಿಯಾನ ಸಿದ್ಧತೆ*
ಜಿಲ್ಲಾದ್ಯಂತ 646 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು 2,664 ಲಸಿಕದಾರರು ನಿಗದಿತ 1,11,212 (5 ವರ್ಷದೊಳಗಿನವರಿಗೆ) ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ಅಭಿಯಾನದ ಮೇಲ್ವಿಚಾರಣೆಗಾಗಿ 136 ಮೇಲ್ವಿಚಾರಕ ಸಿಬ್ಬಂದಿಯನ್ನು ನೇಮಿಸಲಾಗಿದೆ.
ನಗರ ಪ್ರದೇಶಗಳಲ್ಲಿನ ಬಸ್ ನಿಲ್ದಾಣಗಳು, ಧಾರ್ಮಿಕ ಕೇಂದ್ರಗಳು ಸೇರಿದಂತೆ ವಿವಿಧ ಜನಸಂದಣಿ ಪ್ರದೇಶಗಳಲ್ಲಿ ಕೇಂದ್ರಗಳು ಕಾರ್ಯ ನಿರ್ವಹಿಸಲಿದ್ದು ಪಾಲಕರೊಂದಿಗೆ ಊರುಗಳಿಗೆ ಪ್ರಯಾಣಿಸುತ್ತಿರುವ ಮಕ್ಕಳಿಗೂ ಪೋಲಿಯೋ ಹನಿ ಹಾಕಲು 37 ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದೆ.
*ರಾಷ್ಟ್ರೀಯ ಲಸಿಕಾ ದಿನ*
ಕೇಂದ್ರ ಸರ್ಕಾರವು ಡಿ.21 ರ ದಿನವನ್ನು ರಾಷ್ಟ್ರೀಯ ಲಸಿಕಾ ದಿನ (ಪೋಲಿಯೋ ಭಾನುವಾರ) ಎಂಬುದಾಗಿ ಘೋಷಿಸಿದೆ. ಇದರ ಅಂಗವಾಗಿ ಜಿಲ್ಲಾದ್ಯಂತ ಪೋಲಿಯೋ ಹನಿಗಳನ್ನು ನಿರ್ದಿಷ್ಟ ಬೂತ್‌ಗಳಲ್ಲಿ 0-5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ನೀಡಲಾಗುತ್ತದೆ. ಅನಿವಾರ್ಯ ಕಾರಣಗಳಿಂದ ಮಕ್ಕಳು ಪೋಲಿಯೋ ಬೂತ್‌ಗಳಿಗೆ ಬಾರದೇ ಇದ್ದ ಪಕ್ಷದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 2 ದಿನ ಹಾಗೂ ನಗರ ಪ್ರದೇಶಗಳಲ್ಲಿ 3 ದಿನ (ಡಿ.21 ರಿಂದ ಡಿ 24 ವರೆಗೆ) ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿರುವುದನ್ನು ಖಾತ್ರಿಪಡಿಸಿಕೊಳ್ಳಲಿದ್ದಾರೆ.