ಬೇಸಿಗೆ ರಜೆಯಲ್ಲಿಯೇ ಹೊಸ ವಿದ್ಯಾರ್ಥಿಗಳ ದಾಖಲಾತಿಗೆ ಕಸರತ್ತು

ಸರ್ಕಾರಿ ಪಿಯು ಕಾಲೇಜ್.
ಸರ್ಕಾರಿ ಪಿಯು ಕಾಲೇಜ್.
Published on
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅನಧಿಕೃತ ಕಾಲೇಜುಗಳ ಹಾವಳಿ ರಾಜಾರೋಷವಾಗಿ ಕಾಡುತ್ತಿದ್ದು ದುಬಾರಿ ಡೊನೇಷನ್‌ ವಸೂಲಿ ಮಾಡಿ, ಹಣ ಸಂಪಾದಿಸಲು ಕೆಲ ಸಂಸ್ಥೆಗಳು ಮುಂದಾಗಿವೆ.
ಹೌದು! ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿಲ್ಲ. ಈಗಲೇ ಕೆಲವೆಡೆ ದಾಖಲಾತಿಗೆ ಕಸರತ್ತು ನಡೆಸಲಾಗುತ್ತಿದೆ. ಸಾಮಾಜಿಕ ಜಾಲತಾಣದ ಜತೆಗೆ ವ್ಯಾಪಕ ಪ್ರಚಾರ ಕೈಗೊಂಡು ಮಕ್ಕಳನ್ನು ಸೆಳೆಯಲು ಯತ್ನಿಸಲಾಗುತ್ತಿದೆ. ದಾಖಲೆಯ ಫಲಿತಾಂಶ ಪಡೆಯುವುದರ ಬಗ್ಗೆ ಕೊಚ್ಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿದ್ದಂತೆ ವಂಚನೆಗೊಳಗಾಗದಿರಲು ಪಿಯು ಶಿಕ್ಷಣ ಇಲಾಖೆಯು ಸಾವರ್ಜನಿಕರಿಗೆ ಮನವಿ ಮಾಡಿದೆ.
ಇನ್ನು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಖಾಸಗಿ ಕಾಲೇಜಿನ ಶೈಕ್ಷಣಿಕ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರಚಾರದ ಕರಪತ್ರಗಳನ್ನು ವಿತರಿಸುತ್ತಿವೆ. ಆಕರ್ಷಕ ಕಟ್ಟಡ, ನುರಿತ ಸಿಬ್ಬಂದಿ, ಮೂಲ ಸೌಕರ್ಯಗಳು, ದಾಖಲೆ ಪ್ರಮಾಣದ ಫಲಿತಾಂಶಕ್ಕೆ ಉತ್ತಮ ಮಾರ್ಗದರ್ಶನ ಸೇರಿದಂತೆ ನಾನಾ ಅಂಶಗಳನ್ನು ಹೇಳಲಾಗುತ್ತಿದೆ. ಕೆಲವೆಡೆ ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆಯನ್ನು ಪಡೆದು, ಸಂಪರ್ಕದಲ್ಲಿದ್ದು ದಾಖಲಾತಿಯ ಸೀಟುಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಈಗಲೇ ದಾಖಲೆ ಸಮೇತ ಶುಲ್ಕವನ್ನು ಪಾವತಿಸಲು, ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಲೇಜಿಗೆ ಬರಲು ಸಲಹೆ ನೀಡುತ್ತಿವೆ.
ಪ್ರೌಢಶಾಲೆಯ ಜತೆಗೆ ಪಿಯು ಕಾಲೇಜುಗಳನ್ನು ಹೊಂದಿರುವ ಕಡೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿಯೇ ಮುಂದುವರೆಯುವ ಇಲ್ಲವೇ ಬೇರೆ ದಾಖಲಾಗುವುದಕ್ಕೆ ಸಂಬಂಧಿಸಿದಂತೆ ಲಿಖಿತವಾಗಿ ದೃಢೀಕರಣ ಪತ್ರವನ್ನು ನೀಡಲು ಸಹ ಒತ್ತಡ ಹೇರಲಾಗುತ್ತಿದೆ.
ಎಂದಿನಂತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಅವಧಿಯಲ್ಲಿಯೇ ಖಾಸಗಿ ಸಂಸ್ಥೆಗಳು ಮಾತ್ರ ಕಾಲೇಜಿನ ವಿಶೇಷತೆಯ ಪ್ರಚಾರ ಪ್ರಾರಂಭಿಸಿವೆ. ಸೀಮಿತ ಸೀಟುಗಳಿಗೆ ಅನುಗುಣವಾಗಿ ಆದಷ್ಟು ಆರ್ಥಿಕ ಸ್ಥಿತಿವಂತರು, ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳು ದಾಖಲಾದರೆ ಸಾಕು ಎಂಬ ಧೋರಣೆಯನ್ನು ಹೊಂದಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net