ಕಚೇರಿಗಳು ಹಾಗೂ ಶಾಲೆಗಳಿಗೆ ತಡವಾಗಿ ಆಗಮನ, ಶೀಘ್ರ ನಿರ್ಗಮನ, ಹಾಜರಾತಿ ಪುಸ್ತಕದಲ್ಲಿ ಮನಸ್ಸಿಗೆ ಬಂದಂತೆ ಸಹಿ ಹಾಕಿಕೊಳ್ಳುವುದು ಸೇರಿದಂತೆ ನಾನಾ ಕಳ್ಳಾಟಗಳಿಗೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಮೊಬೈಲ್ ಆಧಾರಿತ ಹಾಜರಾತಿ ದೃಢೀಕರಣಕ್ಕೆ ಆದೇಶಿಸಿದ್ದಾರೆ. ಅದರಂತೆ ಪ್ರಾಯೋಗಿಕವಾಗಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಕಚೇರಿಗಳಲ್ಲಿನ ವಿವಿಧ ಹಂತದ ಅಧಿಕಾರಿಗಳು, ಬೋಧಕೇತರ ಸಿಬ್ಬಂದಿ ಈ ವಿಶೇಷ ವ್ಯವಸ್ಥೆಯಲ್ಲಿ ಹಾಜರಾತಿಯನ್ನು ದೃಢೀಕರಿಸಿದ್ದು ಇದು ಪೂರ್ಣ ಪ್ರಮಾಣದಲ್ಲಿ ಎಲ್ಲರಿಗೂ ಅನ್ವಯವಾಗುತ್ತಿದೆ.