

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ಬ್ಯಾಂಕುಗಳಲ್ಲಿ ನಿಷ್ಕ್ರಿಯಗೊಂಡಿರುವ 2,15,344 ಖಾತೆಗಳಲ್ಲಿ 46.79 ಕೋಟಿ ರೂ ಹಣ ಇದೆ.
ನಿಷ್ಕ್ರಿಯ ಬ್ಯಾಂಕುಗಳಲ್ಲಿನ ಹಣವನ್ನು ಸಂಬಂಧಪಟ್ಟ ಗ್ರಾಹಕರು ನಿಯಮಾನುಸಾರ ಪಡೆಯಲು ಕೇಂದ್ರ ರಿಸರ್ವ್ ಬ್ಯಾಂಕ್ ಅವಕಾಶ ನೀಡಿದೆ. ಇದರ ಬಗ್ಗೆ ಈಗಾಗಲೇ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಹಾಗೆಯೇ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನವನ್ನು ಕೈಗೊಳ್ಳುತ್ತಿದ್ದು ಜಿಲ್ಲೆಯಲ್ಲೂ ಪ್ರಕ್ರಿಯೆಯೂ ನಡೆಯಲಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮಾಹಿತಿ ನೀಡಿದೆ. ನಿಷ್ಕ್ರಿಯವಾಗಿರುವ ಉಳಿದಿರುವ ಬ್ಯಾಂಕ್ ಖಾತೆಗಳಲ್ಲಿ ಠೇವಣಿ, ವಿಮಾ ಕಂತು ಮತ್ತು ಷೇರುಗಳನ್ನು ಆಯಾ ಮಾಲೀಕರು ಇಲ್ಲವೇ ವಾರಸುದಾರರಿಗೆ ನಿಯಮಾನುಸಾರ ಹಸ್ತಾಂತರಿಸಲಾಗುತ್ತದೆ.
*ಬ್ಯಾಂಕುಗಳಲ್ಲಿ ಬಾಕಿ ಹಣ*
ಈಗಾಗಲೇ ಜಿಲ್ಲೆಯಲ್ಲಿರುವ ಆಯಾ ಬ್ಯಾಂಕುಗಳಲ್ಲಿನ ನಿಷ್ಕ್ರಿಯಗೊಂಡಿರುವ ಖಾತೆ, ಇವುಗಳಲ್ಲಿ ಜಮಾಗೊಂಡಿರುವ ಹಣ ಪ್ರಮಾಣದ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಮಾಹಿತಿ ಸಂಗ್ರಹಿಸಿದೆ. ಮುಂಬರುವ ದಿನಗಳಲ್ಲಿ ಗ್ರಾಹಕರ ಹಿತವನ್ನು ಕಾಪಾಡುವ ಉದ್ದೇಶದಿಂದ ನಿಯಮಾನುಸಾರ ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಬಗ್ಗೆ ಕೇಂದ್ರ ರಿಸರ್ವ್ ಬ್ಯಾಂಕಿನ ಮಾರ್ಗದರ್ಶನದಂತೆ ತಿಳಿಸಲಾಗಿದೆ.
ಕಳೆದ 10 ವರ್ಷಗಳಿಗಿಂತಲೂ ಹಿಂದೆ ಸೃಜನೆಯಾದ ಬ್ಯಾಂಕ್ ಖಾತೆಗಳು ಕಾಲ ಕಾಲಕ್ಕೆ ನಿರ್ವಹಣೆಯಿಲ್ಲದೇ ನಿಷ್ಕ್ರಿಯಗೊಂಡಿವೆ. ಹೊಸ ಖಾತೆಗಳನ್ನು ಪಡೆದುಕೊಳ್ಳುವ ಭರದಲ್ಲಿ ಹಳೇ ಖಾತೆಗಳನ್ನು, ಇದರಲ್ಲಿ ಹಣದ ಪ್ರಮಾಣವನ್ನು ಅನೇಕ ಗ್ರಾಹಕರು ಮರೆತು ಹೋಗಿದ್ದಾರೆ. ಮತ್ತೆ ವಾಪಸ್ ಪಡೆಯಲು ಹೆಚ್ಚುವರಿ ಶುಲ್ಕದ ದಂಡ ತೆರಬೇಕು ಹಾಗೂ ಕಠಿಣ ನಿಯಮಗಳನ್ನು ಪಾಲಿಸಬೇಕು ಎಂಬ ಭಾವನೆಯಲ್ಲಿ ಸುಮ್ಮನಾಗಿದ್ದರು. ಇದೀಗ ಸರಳ ರೀತಿಯಲ್ಲಿ ಅರ್ಹರು ಹಣವನ್ನು ಹಿಂಪಡೆಬಹುದಾಗಿದೆ. ಪ್ರಸ್ತುತ ಗ್ರಾಹಕರ ನಿಷ್ಕ್ರಿಯ ಬ್ಯಾಂಕ್ ಖಾತೆಯಲ್ಲಿನ ಹಣವು ಆರ್‌ಬಿಐಗೆ ವರ್ಗಾವಣೆಗೊಂಡಿದೆ. ಆಂದೋಲನದಲ್ಲಿ ಅಗತ್ಯ ದಾಖಲಾತಿಗಳನ್ನು ಬ್ಯಾಂಕ್‌ಗೆ ಸಲ್ಲಿಸಿ, ಸಂಬಂಧಪಟ್ಟವರು ಹಣ ಪಡೆಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ http:\\udgarm.rbi.org.in ನ ಮೂಲಕ ಪಡೆಯಬಹುದು.