ಅಂಚೆ ಕಚೇರಿಗೆ ಕಟ್ಟಿದ ಹಣದಲ್ಲಿ ವಂಚನೆ, ಮುತ್ತಿಗೆ ಹಾಕಿ ಆಕ್ರೋಶ

ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ
ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ
Published on
ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿನ ಗ್ರಾಮ ಅಂಚೆ ಸಹಾಯಕಿಯಿಂದ ವಂಚನೆಗೊಳಗಾದ ಖಾತೆದಾರರು ಇಲ್ಲಿನ ಅಂಚೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ೨೦೨೫ ನೇ ಸಾಲಿನ ಡಿ.26 ರಂದು ಗೌರಿಬಿದನೂರು ತಾಲೂಕಿನ ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಹಣ ವಂಚನೆ ಮಾಡಿರುವ ಗ್ರಾಮದ ಅಂಚೆ ಸಹಾಯಕಿ ರಮ್ಯಾ ವಿರುದ್ಧ ಖಾತೆದಾರರು ಹಣ ವಾಪಾಸ್ ನೀಡಬೇಕು ಎಂದು ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು.ಆಗ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದರು. ಇದರಿಂದ ಸುಮ್ಮನಾಗಿದ್ದ ಖಾತೆದಾರರು ಮತ್ತೆ ಹೋರಾಟ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಅಧಿಕಾರಿಗಳು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಣ ಕಳೆದುಕೊಂಡ ನಮಗೆ ಕಚೇರಿ ಆವರಣದಲ್ಲಿ ಪ್ರತಿಭಟಿಸಲು ಪೊಲೀಸರು ಅವಕಾಶ ನೀಡುತ್ತಿಲ್ಲ. ವಂಚಿಸಿದವರಿಗೆ ಮಾತ್ರ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹಣ ಕಳೆದುಕೊಂಡು ಎರಡು ತಿಂಗಳು ಕಳೆದರೂ ನಯಾ ಪೈಸೆ ವಾಪಸ್ ನೀಡಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು.
ಅಂಚೆ ಕಚೇರಿಯಲ್ಲಿ ನಾನು 12 ಲಕ್ಷ ಹಣ ಕಟ್ಟಿದ್ದರೆ, 11 ಲಕ್ಷ ರೂಪಾಯಿಗಳನ್ನು ರಮ್ಯಾ ತಿಂದು ಹಾಕಿದ್ದಾಳೆ. ಖಾತೆಯಲ್ಲಿ ಬರೀ 1 ಲಕ್ಷ ಮಾತ್ರ ತೋರಿಸುತ್ತಿದೆ. ಪೊಲೀಸರ ಮುಂದೆ ವಿಚಾರಣೆ ನಡೆಸಿದಾಗ, ರಮ್ಯಾ ಹಣ ವಾಪಾಸ್ ನೀಡುವುದಾಗಿ ಹೇಳಿದ್ದಳು. ಒಂದು ದಿನದ ಬಳಿಕ ಕೇಳಿದಾಗ ನ್ಯಾಯಾಲಯದಲ್ಲಿ ತೀರ್ಮಾನ ಮಾಡಿಕೊಂಡು ಬರುತ್ತೇನೆ ಎಂದು ಹೇಳುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸರಿಯಾಗಿ ಊಟ ನಿದ್ದೆಯಿಲ್ಲ, ಖಾಯಿಲೆಗಳಿಂದ ಬಳಲುತ್ತಿದ್ದೇನೆ, ಕಾಲಿಗೆ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಈಗ ಕೈಯಲ್ಲಿ ಹಣವಿಲ್ಲದೆ ಸಾಯುವ ಪರಿಸ್ಥಿತಿ ಬಂದಿದೆ, ಅಂಚೆ ಕಚೇರಿ ಅಧಿಕಾರಿಗಳಿಗೆ ಕೇಳೋಣ ಎಂದರೆ ಪೊಲೀಸರು ನಮ್ಮನ್ನು ತಡೆಯುತ್ತಿದ್ದಾರೆ, ಆದರೆ ಹಣ ವಂಚನೆ ಮಾಡಿರುವವರಿಗೆ ಸಾಥ್ ನೀಡುತ್ತಿದ್ದಾರೆ, ಯಾವ ರಾಜಕಾರಣಿ, ಯಾವ ಅಧಿಕಾರಿಯು ನಮ್ಮ ಬೆಂಬಲಕ್ಕೆ ಬರುತ್ತಿಲ್ಲ ಎಂದು ಹಣ ಕಳೆದುಕೊಂಡ ನಾಗಮಣಿ ಅಳಲನ್ನು ತೋಡಿಕೊಂಡಿದ್ದಾರೆ. ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಹಣ ಕಳೆದುಕೊಂಡವರ ದಾಖಲೆಗಳ ಪರಿಶೀಲನೆಯ ನಡೆಯುತ್ತಿದೆ. ಆದಷ್ಟು ಬೇಗ ಅರ್ಹರಿಗೆ ಹಣ ವಾಪಸ್‌ಕೊಡಿಸಲಾಗುವುದು ಎಂದು
ಕೋಲಾರ ಅಂಚೆ ವಿಭಾಗದ ಡೆಪ್ಯೂಟಿ ಸೂಪರ್ ಇಂಡೆಂಟ್ ದಯಾನಂದ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net