

ಚಿಕ್ಕಬಳ್ಳಾಪುರ: ವಿವಾದ ಸೃಷ್ಟಿಯಾಗಿರುವ ನಡುವೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಜಿಲ್ಲಾಡಳಿತ ಮತದಾರ ಪಟ್ಟಿ ಪ್ರಕಟಿಸಿದ್ದು, ಪಕ್ಷಗಳಲ್ಲಿ ಮತ ಬಲ ತಂತ್ರಗಾರಿಕೆ ಕಸರತ್ತು ಜೋರಾಗಿದೆ.
ಸಂಸದ ಡಾ. ಕೆ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ವಿಧಾನ ಪರಿಷತ್ ಸದಸ್ಯರಾದ ಎಂ.ಆರ್. ಸೀತಾರಾಂ, ಅನಿಲ್ ಕುಮಾರ್ ಮತ್ತು ನಗರಸಭೆತ 31 ಸದಸ್ಯರು ಸೇರಿ 35 ಮತದಾರರಿದ್ದು, ಸೆ.12ರಂದು ಎರಡೂ ಸ್ಥಾನಗಳಿಗೆ ಉಪ ವಿಭಾಗಾಧಿಕಾರಿ ಅಶ್ವಿನ್ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೆ ಈಗಾಗಲೇ ಮತದಾರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಗೊಂದಲ ಸೃಷ್ಟಿ
ಪ್ರಸ್ತುತ ನಗರಸಭೆಯಲ್ಲಿ ಕಾಂಗ್ರೆಸ್‌ನ 16, ಜೆಡಿಎಸ್ 2, ಬಿಜೆಪಿ 9 ಮತ್ತು ಪಕ್ಷೇತರ 4 ಸದಸ್ಯರಿದ್ದಾರೆ. ಇದರ ನಡುವೆ ಕೈ ಪಾಳಯದ ನಾಲ್ವರು ಸದಸ್ಯರು ಮಾತೃಪಕ್ಷಕ್ಕೆ ಕೈಕೊಟ್ಟು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಮತ್ತೊಂದೆಡೆ ದೂರ ಹೋಗಿರುವ ಸ್ವಪಕ್ಷೀಯ ಸದಸ್ಯರ ಜತೆಗೆ ಇತರ ಸದಸ್ಯರನ್ನು ಸೆಳೆಯಲು ಮುಂದಾಗಿರುವ ಕಾಂಗ್ರೆಸ್, ವಿಧಾನ ಪರಿಷತ್ ಸದಸ್ಯರ ಮತ ಬಲದ ಮೂಲಕ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆದಿದೆ. ನಾಲ್ಕೈದು ವಿಧಾನ ಪರಿಷತ್ ಸದಸ್ಯರ ಸೇರ್ಪಡೆಗೊಳಿಸುವ ಪ್ರಯತ್ನವು ಮೊದಲು ಗೊಂದಲ ಸೃಷ್ಟಿಸಿತ್ತು. ಇದರ ಬಗ್ಗೆ ಬಿಜೆಪಿ ನಾಯಕರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದರು. ಇದರ ನಡುವೆಯೂ ಎಂ.ಆರ್. ಸೀತಾರಾಂ, ಅನಿಲ್‌ಕುಮಾರ್ ಹೆಸರು ಮತದಾರ ಪಟ್ಟಿಗೆ ಸೇರ್ಪಡೆಯಾಗಿದ್ದು, ದೊಡ್ಡಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಮತ ಚಲಾಯಿಸುವ ಬಯಕೆಯಲ್ಲಿರುವ ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ (ಕಾಂಗ್ರೆಸ್) ಚಿಕ್ಕಬಳ್ಳಾಪುರದ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಬಯಸಿಲ್ಲ ಎನ್ನಲಾಗುತ್ತಿದೆ. ಈಗ ಶಾಸಕ, ಇಬ್ಬರು ವಿಧಾನಪರಿಷತ್ ಸದಸ್ಯರು, ಜೆಡಿಎಸ್‌ನ ಇಬ್ಬರು, ಪಕ್ಷೇತರ 1, ಕಾಂಗ್ರೆಸ್‌ನ 12 ಸದಸ್ಯರ ಬಲದೊಂದಿಗೆ ಕಾಂಗ್ರೆಸ್‌ಗೆ 18 ಮತಗಳ ಬಲವಿದೆ. ವಿಪ್ ಉಲ್ಲಂಸುತ್ತಿರುವ ಸ್ವಪಕ್ಷೀಯ ನಗರಸಭೆ 4 ಸದಸ್ಯರನ್ನು ಸೆಳೆದುಕೊಂಡರೆ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ. ಮತ್ತೊಂದೆಡೆ ಸಂಸದ 1, ಪಕ್ಷೇತರ 3, ಬಿಜೆಪಿ 9, ಬಂಡಾಯ ಕಾಂಗ್ರೆಸ್ 4 ಸದಸ್ಯರು ಸೇರಿ 17 ಸದಸ್ಯರನ್ನು ಬಿಜೆಪಿ ಹೊಂದಿದ್ದು ಪರಸ್ಪರ ಎರಡೂ ಕಡೆ ಕೆಲ ಸದಸ್ಯರು ಕೊನೇ ಕ್ಷಣದಲ್ಲಿ ಕೈಕೊಡುವ ಸಾಧ್ಯತೆ ಇದ್ದು, ಚುನಾವಣಾ ಲಿತಾಂಶವು ಕುತೂಹಲ ಮೂಡಿಸಿದೆ.
ಪ್ರವಾಸದಲ್ಲಿ ಸದಸ್ಯರು
ಈಗಾಗಲೇ ಬಹುತೇಕ ನಗರಸಭೆ ಸದಸ್ಯರು ಪ್ರತ್ಯೇಕ ಬಣಗಳಾಗಿ ಪ್ರವಾಸ ಹೋಗಿದ್ದಾರೆ. ಕಾಂಗ್ರೆಸ್ ಬಣ ಕೋಲ್ಕತ, ನೇಪಾಳದ ಕಠ್ಮಂಡು ಕಡೆ ತಿರುಗಾಡುತ್ತಿದ್ದರೆ, ಬಿಜೆಪಿ ಬಣ ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿದೆ. ಸದಸ್ಯತ್ವ ಬಲ ಹೆಚ್ಚಿಸಿಕೊಳ್ಳಲು ಎರಡೂ ಕಡೆಯೂ ಸದಸ್ಯರನ್ನು ಸೆಳೆಯುವ ನಿಟ್ಟಿನಲ್ಲಿ ಸಂಪರ್ಕಿಸಲು ಯತ್ನಿಸಲಾಗುತ್ತಿದೆ. ಕುದುರೆ ವ್ಯಾಪಾರವೂ ಜೋರಾಗಿದೆ.