

ಯಲಬುರ್ಗಾ: ತಾಲೂಕಿನ ವಜ್ರಬಂಡಿ ಗ್ರಾಪಂ ವ್ಯಾಪ್ತಿಯ ಚಿಕ್ಕ ಬನ್ನಿಗೋಳ ತಾಂಡಾದಲ್ಲಿ ಮೂಲಸೌಕರ್ಯಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ವಚ್ಛತೆ ಇಲ್ಲದೆ ಚರಂಡಿ ದುರ್ವಾಸನೆಯಿಂದ ಜನರಿಗೆ ಸಾಕಾಗಿದೆ. ಸರಿಯಾದ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಗ್ರಾಪಂ ಸದಸ್ಯರು ದೂರು ಸಲ್ಲಿಸಿದರೂ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ರಸ್ತೆ ಮೇಲೆ ತ್ಯಾಜ್ಯ ಹಾಗೂ ಕೊಳಚೆ ನೀರು ಹರಿತ್ತಿದ್ದು ಸ್ವಚ್ಛತೆ ಮಾಯವಾಗಿದೆ. ಗ್ರಾಪಂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ವಿವಿಧ ಸಮಸ್ಯೆ ಕಂಡರೂ ಅಧಿಕಾರಿಗಳು ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದು, ತಮಗೆ ಇಷ್ಟ ಬಂದ ಸಮಯದಲ್ಲಿ ಕಚೇರಿಗೆ ಬಂದು ಹೋಗುತ್ತಿದ್ದಾರೆ. ಈ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಇದನ್ನೂ ಓದಿ : ಮಹಿಳಾ ದೌರ್ಜನ್ಯ ತಡೆಯಿರಿ, ಸ್ಪಂದಿಸದ ಅಧಿಕಾರಿಗಳು
ಕೇಂದ್ರ ಸರ್ಕಾರ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿ ಸಾಕಷ್ಟು ಅನುದಾನ ನೀಡಿದರೂ ಬನ್ನಿಗೊಳ ತಾಂಡಾ ಅಭಿವೃದ್ಧಿ ಕಂಡಿಲ್ಲ. ಮನೆಗೊಂದು ಶೌಚಗೃಹ ಯೋಜನೆ ಅನುಷ್ಠಾನಕ್ಕೆ ಬಂದರೂ ವಜ್ರಬಂಡಿ ಗ್ರಾಪಂ ತನ್ನ ವ್ಯಾಪ್ತಿಯ ಗ್ರಾಮಗಳನ್ನು ಬಯಲು ಶೌಚಮುಕ್ತಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದ ಸಾರ್ವಜನಿಕರು ಮಲ ವಿರ್ಸಜನೆಗೆ ಬಯಲನ್ನೇ ಅವಲಂಬಿಸುವಂತಾಗಿದೆ.
ಚಿಕ್ಕ ಬನ್ನಿಗೋಳ ತಾಂಡಾದಲ್ಲಿ ಚರಂಡಿ ಗಬ್ಬು ನಾರುತ್ತಿವೆ. ಕುಡಿವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ತ್ಯಾಜ್ಯ ಹಾಗೂ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಸ್ವಚ್ಛತೆಗಾಗಿ ದೂರು ನೀಡಿದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುತ್ತಿಲ್ಲ. ಜಿಪಂ ಸಿಇಒ ಈ ಕುರಿತು ಗಮನ ಹರಿಸಿ ಅಭಿವೃದ್ಧಿ ಬಗ್ಗೆ ಕಾಳಜಿ ಇರುವ ಸಿಬ್ಬಂದಿ ನೇಮಕ ಮಾಡಬೇಕು. | ಶಿವಮೂರ್ತಿ ರಾಥೋಡ್ ವಜ್ರಬಂಡಿ, ಗ್ರಾಪಂ ಸದಸ್ಯ ಚಿಕ್ಕ ಬನ್ನಿಗೋಳ ತಾಂಡಾಕ್ಕೆ ಪಂಚಾಯಿತಿಯಿಂದ ಪರಿಚಾರಕರನ್ನು ಕಳುಹಿಸಲಾಗಿದೆ. ಆದರೆ ಅಲ್ಲಿನ ಸದಸ್ಯರು ಸ್ವಚ್ಛತಾ ಕಾರ್ಯ ಮಾಡಲು ಬಿಟ್ಟಿಲ್ಲ. ಆದರೂ ನೈರ್ಮಲ್ಯೀಕರಣ ಯೋಜನೆಯಡಿ ಸ್ವಚ್ಛತೆ ಕೈಗೊಳ್ಳಲಾಗಿದೆ. ಚರಂಡಿಯಲ್ಲಿನ ತ್ಯಾಜ್ಯ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. | ಹನುಮಂತರಾವ್ ಯಂಕಂಚಿ, ಪಿಡಿಒ, ವಜ್ರಬಂಡಿ ಗ್ರಾಪಂ