ಚೀಕನಹಳ್ಳಿ ಶಾಲೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೋಟ್ ಬುಕ್ ವಿತರಣೆ

8blrp1
Published on

ಬೇಲೂರು: ಬೆಂಗಳೂರಿನ ಚಿದಂಬರರಾವ್ ಮೆಮೋರಿಯಲ್ ಟ್ರಸ್ಟ್ ಹಾಗೂ ದಿನೇಶ್ ಜೋಷಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಚೀಕನಹಳ್ಳಿಯ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸೋಮವಾರ ನೋಟ್ ಬುಕ್ ವಿತರಿಸಿ, ಕ್ರೀಡೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.


ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿದ ದಿನೇಶ್ ಜೋಷಿ ಫೌಂಡೇಷನ್ ಅಧ್ಯಕ್ಷ ದಿನೇಶ್ ಜೋಷಿ, ಪ್ರತಿವರ್ಷದಂತೆ ನಮ್ಮ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್‌ಗಳನ್ನು ಶಾಲೆ ಪ್ರಾರಂಭದಲ್ಲೇ ವಿತರಿಸಲಾಗುತ್ತಿತ್ತು. ಆದರೆ ಈ ಬಾರಿ ವಿಳಂಬವಾಗಿದೆ. ಮುಂದೆ ಸರಿಯಾದ ಸಮಯಕ್ಕೆ ವಿತರಿಸಲಾಗುವುದು ಎಂದರು.


ಚೀಕನಹಳ್ಳಿ ಗ್ರಾಮಕ್ಕೆ ವಿಜಯ ಚಿದಂಬರರಾವ್ ಅವರ ಕೊಡುಗೆ ಅಪಾರವಾಗಿದ್ದು, ಇಲ್ಲಿನ ಕೆಲ ಸರ್ಕಾರಿ ಕಚೇರಿಗೆ ನಿವೇಶನ ನೀಡಿದ್ದಾರೆ. ಜತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಮುಂದಿದ್ದಾರೆ. ಪತಿ ಚಿದಂಬರ್‌ರಾವ್ ನಿಧನದ ನಂತರ ವಿಜಯ ಚಿದಂಬರರಾವ್ ಅವರೂ ಹೆಚ್ಚಿನ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ 7 ವರ್ಷಗಳಿಂದ ವರ್ಷಕ್ಕೆ ಬೇಕಾಗುವಷ್ಟು ನೋಟ್ ಬುಕ್‌ಗಳನ್ನು ಕೊಡುತ್ತಿದ್ದಾರೆ. ಸಮಾಜ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವು ಏನು ಕೊಟ್ಟಿದ್ದೇವೆ ಎಂಬುದನ್ನು ಅರಿತು ನಾವೂ ಚಿದಂಬರ್‌ರಾವ್ ಮೆಮೋರಿಯಲ್ ಟ್ರಸ್ಟ್ ಜತೆಗೆ ಕೈ ಜೋಡಿಸುತಿದ್ದೇವೆ. ನಾವು ಕೊಟ್ಟ ಸಹಕಾರ ಸಫಲತೆಯಾಗಬೇಕಾದರೆ ವಿದ್ಯಾರ್ಥಿಗಳು ಗುರುಗಳು ಹೇಳಿದ ಪಾಠವನ್ನು ಆಲಿಸಿ, ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟರೆ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದರು.


ಚೀಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಗೀತಾ ಮಾತನಾಡಿ, ಸಾರ್ವಜನಿಕ ವಲಯದಲ್ಲಿ ದಾನಿಗಳು ಸಿಗುವುದು ತುಂಬಾ ವಿರಳ. ಆದರೆ ಚಿದಂಬರಾವ್ ಮೆಮೋರಿಯಲ್ ಟ್ರಸ್ಟ್ ಹಾಗೂ ದಿನೇಶ್ ಜೋಷಿ ಟ್ರಸ್ಟ್ ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿರುವುದು ಶ್ಲಾಘನೀಯವಾಗಿದೆ ಎಂದರು.


ವಿಜಯ ಚಿದಂಬರ್‌ರಾವ್, ಟ್ರಸ್ಟ್ ನಿರ್ದೇಶಕ ಕೃಷ್ಣಮೂರ್ತಿ, ಟ್ರಸ್ಟ್ ಕಾರ್ಯದರ್ಶಿ ನಂದಿನಿ ಜೋಷಿ, ಶಿಕ್ಷಕರಾದ ಹಿರಿಯಣ್ಣಗೌಡ, ಶ್ಯಾಮಲಾದೇವಿ, ದೀಪಕ್, ಉಮಾದೇವಿ, ಪ್ರಿಯಾಂಕಾ, ಮೋಹನ್‌ಕುಮಾರ್, ಪ್ರಭಾವತಿ, ಮಂಜುನಾಥ್, ರವಿ, ಸುಧಾಮಣಿ, ಗಂಗಮ್ಮ, ನಿಂಗರಾಜು, ಮಮತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net