

ಮಾನ್ವಿ: ಸಣ್ಣ ವ್ಯಾಪಾರಿಗಳ ಹಾಗೂ ಬಡವರ ಆರ್ಥಿಕ ಸುಧಾರಣೆಗೆ ಸಹಕಾರ ಸಂಘಗಳು ಅಗತ್ಯವಿದೆ. ಬಸವಶ್ರೀ ಸಹಕಾರ ಸಂಘ ಸಾವಿರಾರು ಕುಟುಂಬಗಳನ್ನು ಆರ್ಥಿಕವಾಗಿ ಸದೃಢ ಮಾಡಿದೆ ಎಂದು ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ 20ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಸತತ 20 ವರ್ಷಗಳಿಂದ ಉತ್ತಮ ವ್ಯವಹಾರ ನಡೆಸಿ ಎಲ್ಲರ ವಿಶ್ವಾಸ ಗಳಿಸಿ ಮುನ್ನಡೆಯುವುದು ಕಷ್ಟದ ಕೆಲಸ. ಬಸವಶ್ರೀ ಸಹಕಾರಿ 13 ಸಾವಿರ ಸದಸ್ಯರನ್ನು ಜತೆಗೆ ಕರೆದುಕೊಂಡು ಹೋಗುತ್ತಿರುವುದು ದೊಡ್ಡ ಪವಾಡ ಎಂದರು.
ಸಹಕಾರಿಗಳಲ್ಲಿ ಭೇದ ಇರಬಾರದು. ಸಹಕಾರಿಯ ಆರ್ಥಿಕ ಸದೃಢದೊಂದಿಗೆ ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸಾವಿರ ನಗದು ಕೊಡುವುದು ಶಿಕ್ಷಣದ ಮೇಲಿನ ಕಳಕಳಿ ತೋರಿಸುತ್ತದೆ ಸದಾಶಿವ ಸ್ವಾಮೀಜಿ ಎಂದರು.
ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಾ.ಶಂಕರಗೌಡ ಮಾತನಾಡಿ, ಈ ವರ್ಷ ನಮ್ಮ ಸಹಕಾರಿ 4.46 ಕೋಟಿ ರೂ. ನಿವ್ವಳ ಲಾಭ ಪಡೆದಿದೆ. ಈ ಬಾರಿ ಕೂಡ ಸದಸ್ಯರಿಗೆ ಶೇ.22 ಡಿವಿಡೆಂಟ್ ನೀಡಲಾಗುವುದು. ಕಳೆದ ಬಾರಿ 175 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ್ದೇವೆ. ಈ ವರ್ಷ 126 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಯಾದಗಿರಿ ಮತ್ತು ಕೊಪ್ಪಳದಲ್ಲಿ ಶಾಖೆಗಳನ್ನು ಆರಂಭಿಸಲಾಗುವುದು. ಬಸವಶ್ರೀ ಸಹಕಾರಿ ಬೆಳವಣಿಗೆಗೆ ಗ್ರಾಹಕರು, ಸಿಬ್ಬಂದಿ, ನಿರ್ದೇಶಕ ಮಂಡಳಿಯ ಶ್ರಮವಿದೆ. ಯಾವುದೇ ಸಹಕಾರಿ ಸಾಧನೆ ಮಾಡಲು ಗ್ರಾಹಕರು ಸರಿಯಾದ ವ್ಯವಹಾರ ನಡೆಸಿದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು.
ಇದನ್ನೂ ಓದಿ: ನ್ಯಾಚುರಲ್ ಸ್ಕ್ರಬ್ ‘ಸಾಸಿವೆ’ ಈ ಸಮಸ್ಯೆಗೂ ಸಹಕಾರಿ
ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆರ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ವಿಶ್ವನಾಥ ಪಾಟೀಲ್ ತೋರಣದಿನ್ನಿ, ಪ್ರಾಚಾರ್ಯೆ ಚಂದ್ರಕಲಾ ಸಿಂಧನೂರು, ದೇವಯ್ಯಸ್ವಾಮಿ ಮಾತನಾಡಿದರು. ಬಸವಶ್ರೀ ಸಹಕಾರಿಯ ಸಿಇಒ ವಿರೇಶ ಎನ್.ಹೊಸೂರು ಸಹಕಾರಿಯ ವಾರ್ಷಿಕ ವರದಿ ಮಂಡಿಸಿದರು.
ನಿರ್ದೇಶಕರಾದ ಅಯ್ಯಣ್ಣ ಏರಡ್ಡಿ, ರೇವಣಸಿದ್ದಯ್ಯ ಹಿರೇಮಠ, ವೀರನಗೌಡ, ಅಮರಪ್ಪ, ಶರಣಪ್ಪ ಲ.ಮಲ್ಲಾಪುರು, ಡಾ. ರುದ್ರಗೌಡ, ಚನ್ನಪ್ಪ, ಬಸವರಾಜ ಪಾಟೀಲ್, ಸಂಗನಗೌಡ, ಮಲ್ಲಿಕಾರ್ಜುನ, ಬಸಮ್ಮ ಕಮತರ, ಗಂಗಮ್ಮ ರಾಮದುರ್ಗ, ನಿರ್ಮಲಾ, ಎಸ್.ಶರಣಪ್ಪ, ವ್ಯವಸ್ಥಾಪಕ ಚಂದ್ರಮೌಳೇಶ್ವರ, ಮೇಘರಾಜ್ ಕರ್ಕಿಹಳ್ಳಿ, ಚನ್ನಬಸವ, ಸುಜಿತ್ ಕುಮಾರ, ಸೂಗನಗೌಡ, ಶಕುಂತಲಾ ಇತರರು ಇದ್ದರು.