ಕಲಾ ಪ್ರತಿಭೆ ಅನಾವರಣಗೊಳಿಸಿದ ‘ಚಿಗುರು’

Published on

ವಿಜಯಪುರ: ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಅವಶ್ಯಕತೆ ಇದೆ ಎಂದು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಕ್ಷ ಸುರೇಶ ದೇಸಾಯಿ ಅಭಿಪ್ರಾಯಪಟ್ಟರು.

ನಗರದ ವಿವೇಕ ನಗರದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ‘ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಹಾಗೂ ಕ್ರೀಡೆಯ ಜೊತೆಗೆ ಮಕ್ಕಳಿಗೆ ನಮ್ಮ ಕಲೆ ಸಂಸ್ಕೃತಿ ಸಾಹಿತ್ಯವನ್ನು ಪರಿಚಯಿಸುವುದರೊಂದಿಗೆ ಅವರಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಬೆಳಕಿಗೆ ತರಲು ಶಿಕ್ಷಕರು ಹಾಗೂ ಪೋಷಕರು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.

ಮುಖ್ಯೋಪಾಧ್ಯಾಯ ಜಿ.ಎಂ. ಬಿರಾದಾರ, ಪ್ರಾಥಮಿಕ ವಿಭಾಗದ ಮುಖ್ಯ ಗುರು ಇ.ಜಿ. ಬಿರಾದಾರ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ ಮಾಸ್ತರ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಎಚ್.ಎ. ಮಮದಾಪುರ ನಿರೂಪಿಸಿದರು.

ಸುಮಯ್ಯ ಶೇಖ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಾಟ್ಯ ಕಲಾ ಅಕಾಡೆಮಿಯಿಂದ ಸಮೂಹ ನೃತ್ಯ, ಹಿಟ್ನಳ್ಳಿಯ ಕುಮಾರಿ ನಿಜಾಬಾಯಿ ಹೋಸಾಳಿ ಅವರಿಂದ ಏಕಾಪಾತ್ರಾಭಿನಯ, ಜಾನವಿ ಎನ್. ಗೌಡ ಅವರಿಂದ ಸುಗಮ ಸಂಗೀತ, ಲಕ್ಷ್ಮಿ ಮುರನಕೇರಿ ಅವರಿಂದ ಜಾನಪದ ಗೀತೆಗಳು, ಬಬಲೇಶ್ವರದ ಕುಮಾರ ಸಮರ್ಥ ಸಂಕೊಂಡ ಅವರಿಂದ ನಲಿ-ಕಲಿ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net