

ಬಸವರಾಜ ಇದ್ಲಿ ಹುಬ್ಬಳ್ಳಿ
ಸ್ಮಾರ್ಟ್ ಸಿಟಿ ಹುಬ್ಬಳ್ಳಿ -ಧಾರವಾಡಕ್ಕೆ ಕಳಸಪ್ರಾಯ ಎಂಬಂತೆ ಮಹತ್ವಾಕಾಂಕ್ಷೆಯೊಂದಿಗೆ ಜಾರಿ ಮಾಡಲಾಗಿರುವ ಬಿಆರ್ಟಿಎಸ್ ಯೋಜನೆಯ ಚಿಗರಿ ಬಸ್ಗಳು ಈಗ ‘ಡಕೋಟ’ ಆಗಿವೆ. ಕೆಟ್ಟ ಹಾಗೂ ಸರಿಯಾಗಿಲ್ಲದ ಯಂತ್ರ, ವಾಹನಗಳಿಗೆ ಸಾಮಾನ್ಯವಾಗಿ ಜನರು ಡಕೋಟ ಎನ್ನುತ್ತಾರೆ. ಆ ಸಾಲಿಗೆ ಈಗ ಚಿಗರಿ ಬಸ್ಗಳು, ನಿಲ್ದಾಣಗಳು ಸೇರುತ್ತಿವೆ.
ಆರಂಭವಾದ ಐದು ವರ್ಷಗಳಲ್ಲೇ ಚಿಗರಿ ಬಸ್ಗಳು ಇಂತಹ ದುಸ್ಥಿತಿಗೆ ತಲುಪಿರುವುದು ಸಾವಿರಾರು ಕೋಟಿ ರೂಪಾಯಿ ಸುರಿದು ಮಾಡಿದ ಸುಸಜ್ಜಿತ, ಅತ್ಯಾಧುನಿಕ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ. ಅತಿ ಕಡಿಮೆ ಅವಧಿಯಲ್ಲಿ ವಿನೂತನ ಯೋಜನೆಯೊಂದು ಕಳಪೆ ಮಟ್ಟಕ್ಕೆ ಇಳಿದಿರುವುದು ವಿಪರ್ಯಾಸ.
ಅತಿ ಹೆಚ್ಚು ಹಣ ವ್ಯಯ ಮಾಡಿ ಖರೀದಿಸಲಾದ ಹವಾನಿಯಂತ್ರಿತ ಸೌಲಭ್ಯ ಇರುವ ಚಿಗರಿ ಬಸ್ಗಳು ಆಗಾಗ ಕೆಟ್ಟು ನಿಲ್ಲುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಬಸ್ ಒಳಗಡೆ ಯಾವುದೂ ಸುವ್ಯವಸ್ಥಿತವಾಗಿ ಉಳಿದಿಲ್ಲ. ಎಸಿ ಬಸ್ಗಳು ಈಗ ತಂಪು ಸೂಸುತ್ತಿಲ್ಲ. ಒಳಗಡೆ ಸರಿಯಾಗಿ ನಿಂತುಕೊಳ್ಳಲು ಆಗುತ್ತಿಲ್ಲ.
ಚಿಗರಿ ಬಸ್ನಲ್ಲಿ ಬಹಳಷ್ಟು ಸೀಟ್ಗಳಲ್ಲಿ ಕುಳಿತುಕೊಳ್ಳುವ ಕುಶನ್ ಹಾಳಾಗಿವೆ. ಕೆಲವೆಡೆ ಹಿಡಿಕೆಗಳು ಮುರಿದು ಹೋಗಿವೆ. ಇನ್ನು ಸೀಟ್ ಭರ್ತಿಯಾದ ನಂತರ ನಿಂತುಕೊಂಡ ಪ್ರಯಾಣಿಕರಿಗೆ ಹಿಡಿದುಕೊಳ್ಳಲು ಯಾವುದೇ ಆಧಾರ ಇಲ್ಲವಾಗಿದೆ. ಇದ್ದ ಕೆಲವು ಗ್ರಿಲ್ಗಳು ಮುರಿದು ಹೋಗಿವೆ.
ಅಸಮರ್ಪಕ ಸೇವೆ, ಬಸ್ ನಿಲ್ದಾಣಗಳು ಸರಿಯಾಗಿ ಇಲ್ಲದಿರುವುದು ಇತ್ಯಾದಿ ಕಾರಣಗಳಿಂದ ಮೊದಲೇ ಚಿಗರಿ ಬಸ್ಗಳ ಬಗ್ಗೆ ಅಸಮಾಧಾನ ಹೊಂದಿರುವ ಪ್ರಯಾಣಿಕರಿಗೆ ಈಗ ಮತ್ತಷ್ಟು ಕಿರಿಕಿರಿ ಉಂಟಾಗುತ್ತಿದೆ.
ಅವಳಿನಗರ ಮಧ್ಯೆ ಸುಮಾರು 34 ನಿಲ್ದಾಣಗಳು ಇವೆ. ಪ್ರತಿ ನಿಲ್ದಾಣಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ಮೊದಲು ಸ್ಪೀಕರ್ ಮೂಲಕ ಘೊಷಣೆ ಮಾಡಲಾಗುತ್ತಿತ್ತು. ಈಗ ಬಹುತೇಕ ಬಸ್ಗಳಲ್ಲಿನ ಸ್ಪೀಕರ್ ‘ಆಫ್’ ಆಗಿವೆ. ಹೊಸ ಪ್ರಯಾಣಿಕರು ಬಂದರೆ ಇದು ಯಾವ ಸ್ಟಾಪ್? ಎಂದು ಅಕ್ಕಪಕ್ಕದವರನ್ನು ಕೇಳುವಂತಾಗಿದೆ.
ಇನ್ನು ಪ್ರಯಾಣಿಕರು ಇಳಿಯುವಾಗ ಒತ್ತಬೇಕಾದ ‘ಸ್ಟಾಪ್’ ಬಟನ್ ಹಲವು ಬಸ್ಗಳಲ್ಲಿ ಕಿತ್ತು ಹೋಗಿವೆ. ಇದ್ದರೂ ಕೆಲವು ರ್ವಂಗ್ ಕಂಡಿಷನ್ನಲ್ಲಿಲ್ಲ. ನಿರ್ವಹಣೆ ಕೊರತೆಯಿಂದ ಬಸ್ಗಳಲ್ಲಿ ಪ್ರಯಾಣಿಕರು ಯಾತನೆ ಅನುಭವಿಸುವಂತಾಗಿದೆ. ಪರ್ಯುಯ ವ್ಯವಸ್ಥೆ ಇಲ್ಲದೆ ಅನೇಕರು ಚಿಗರಿಯಲ್ಲಿ ಅನಿವಾರ್ಯವಾಗಿ ಪ್ರಯಾಣ ಮಾಡುತ್ತಿದ್ದಾರೆ. ಹತ್ತಾರು ಸಮಸ್ಯೆಗಳಿದ್ದರೂ ಓಡಾಡುತ್ತಿರುವ ಚಿಗರಿ ಸಂಚಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ನಿಯಂತ್ರಣ ಕಷ್ಟ: ಬಸ್ ಹತ್ತುತ್ತಲೇ ಪ್ರಯಾಣಿಕರು ನಿಯಂತ್ರಣ ತಪ್ಪಿ ಬೀಳುವ ಪ್ರಸಂಗ ಎದುರಾಗುತ್ತಿದೆ. ಪ್ರಯಾಣಿಕರಿಂದ ತುಂಬಿದ್ದ ಬಸ್ ಹತ್ತುವುದು ಇನ್ನೂ ಕಷ್ಟ. ಬ್ರೇಕ್ ಹಾಕುತ್ತಲೇ ಚಿಗರಿ ಒಳಗಿನ ಪ್ರಯಾಣಿಕರು ಓಲಾಡುತ್ತಾರೆ. ಹಾಗಾಗಿ, ಈ ಬಸ್ಗಳಲ್ಲಿ ಪ್ರಯಾಣಿಕರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಬಸ್ ನಿಲ್ದಾಣಗಳಲ್ಲಿ ಆಟೊಮೇಟೆಡ್ ಬಾಗಿಲುಗಳು ಇದ್ದರೂ ಅವು ತೆರೆಯುವುದಿಲ್ಲ. ತೆರೆದ ಬಾಗಿಲು ಬೇಗ ಮುಚ್ಚಿಕೊಳ್ಳುವುದಿಲ್ಲ. ಇದರಿಂದ ಬಸ್ ನಿಲ್ದಾಣದಲ್ಲಿ ಯಾವುದೇ ಸುರಕ್ಷತೆ ಇಲ್ಲವಾಗುತ್ತಿದೆ. ಬಸ್ ಬಾಗಿಲುಗಳು ಸಹ ಕೆಲವೊಮ್ಮೆ ಕೆಲಸ ಮಾಡುವುದಿಲ್ಲ. ಬಸ್ ಸಂಚರಿಸುವಾಗಲೂ ಬಾಗಿಲು ತೆರೆದುಕೊಂಡು ಹೋದ ಘಟನೆಗಳು ನಡೆದಿವೆ. ಹೀಗೆ ಒಂದಿಲ್ಲೊಂದು ಸಮಸ್ಯೆಗಳು ಚಿಗರಿ ಬಸ್ ಪ್ರಯಾಣಿಕರನ್ನು ಕಾಡುತ್ತಿದ್ದು, ಸರ್ಕಾರ, ಬಿಆರ್ಟಿಎಸ್ ಕಂಪನಿಯವರು ಪ್ರಯಾಣಿಕರ ಹಿತ ಕಾಯುವ ಕೆಲಸ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ.
ಚಿಗರಿ ಬಸ್ಗಳಲ್ಲಿ ನಿಲ್ದಾಣಗಳ ಮಾಹಿತಿ, ಇತರೆ ಅನೌನ್ಸ್ಮೆಂಟ್ ವ್ಯವಸ್ಥೆಯ ನಿರ್ವಹಣೆಯನ್ನು ಬಿಆರ್ಟಿಎಸ್ ಕಂಪನಿ ಮಾಡುತ್ತಿದ್ದು, ಇದಕ್ಕಾಗಿ ಹೊಸ ಟೆಂಡರ್ ಕರೆಯಲಾಗಿದೆ. ವಾಯವ್ಯ ಸಾರಿಗೆ ಸಂಸ್ಥೆಗೆ ಬಿಆರ್ಟಿಎಸ್ ಯೋಜನೆ ಹಸ್ತಾಂತರ ಆಗಿರುವುದರಿಂದ ಬಸ್ ಒಳಗಿನ ಇತರೆ ಸೌಲಭ್ಯಗಳ ನಿರ್ವಹಣೆಯನ್ನು ಅವರೇ ಮಾಡಲಿದ್ದಾರೆ. | ರಾಜಕುಮಾರ ಬಿಆರ್ಟಿಎಸ್ ಜಿಎಂ, ಐಟಿ ವಿಭಾಗ