

ಅರಕಲಗೂಡು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಜಾಗೃತ ಅಧಿಕಾರಿ ಕೆ.ಆರ್.ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿ ಕೈಗೊಂಡಿರುವ ಸ್ವಚ್ಛತೆ, ಒಳ ಮತ್ತು ಹೊರ ರೋಗಿಗಳ ಆರೋಗ್ಯ ವಿಚಾರಿಸಿ ಚಿಕಿತ್ಸಾತ್ಮಕ ಕ್ರಮಗಳು ಕುರಿತು ಪರಿಶೀಲನೆ ನಡೆಸಿದರು. ಬಳಿಕ ವೈದ್ಯರು ಮತ್ತು ಸಿಬ್ಬಂದಿ ಸಭೆ ನಡೆಸಿ, ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ, ಯಾವುದೇ ಅಕ್ರಮಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು, ಎಬಿಆರ್‌ಕೆ ಕುರಿತು ಹೆಚ್ಚಿನ ಪ್ರಚಾರ ನೀಡಿ ಆಸ್ಪತ್ರೆ ಆದಾಯ ಹೆಚ್ಚಿಸಿಕೊಳ್ಳಬೇಕು. ಇದರಿಂದ ಬರುವ ಹಣದಲ್ಲಿ ರೋಗಿಗಳಿಗೆ ಉಪಯುಕ್ತವಾಗುವ ವಸ್ತುಗಳ ಖರೀದಿ ಪ್ರಕ್ರಿಯೆ ನಡೆಸುವಂತೆ ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ಒಂದು ಕೋಟಿ ರೂ. ಗೂ ಹೆಚ್ಚಿನ ಹಣ ಎಬಿಎಆರ್‌ಕೆಯಿಂದ ಲಭ್ಯವಾಗಿದ್ದು, ಅದರಲ್ಲಿ ಶೇ.30ರಷ್ಟು ಹಣ ಸಿಬ್ಬಂದಿಯ ಇನ್ಸೆಂಟೀವ್ ಕಳೆದು 70 ಲಕ್ಷ ರೂ. ಖರೀದಿ ಪ್ರಕ್ರಿಯೆಗೆ ಲಭ್ಯವಿದೆ. ಸಾರ್ವಜನಿಕರು ಹೆಚ್ಚಿನ ರೀತಿ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯವನ್ನು ಬಳಸಿಕೊಳ್ಳುವಂತೆ. ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಿದರು.
ಆಸ್ಪತ್ರೆಯಲ್ಲಿನ ಪಾರದರ್ಶಕ ಆಡಳಿತ ನಿರ್ವಹಣೆ ಹಾಗೂ ವೈದ್ಯಕೀಯ ಸೇವೆ ಕೈಗೊಂಡಿರುವ ಆಡಳಿತ ವೈದ್ಯಾಧಿಕಾರಿ ಡಾ. ಸ್ವಾಮಿಗೌಡ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ, ವೈದ್ಯರು, ಸಿಬ್ಬಂದಿ ಇದ್ದರು.