

ಸಾಗರ: ರಾಜ್ಯ ಉಚ್ಚ ನ್ಯಾಯಾಲಯ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಬಿಜೆಪಿ ಪ್ರಮುಖರು ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ಬಹುಸಂಖ್ಯಾತರ ವಿರೋಧಿ ಆಡಳಿತ ಮತ್ತು ಕೆಲವೇ ಜನರ ಓಲೈಕೆ ರಾಜಕಾರಣವೇ ಸಿದ್ದರಾಮಯ್ಯ ಅವರ ಇಂದಿನ ಸ್ಥಿತಿಗೆ ಕಾರಣವಾಗಿದೆ. ತಾವು ಮಿಸ್ಟರ್ ಕ್ಲೀನ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಖಜಾನೆಯನ್ನೇ ಖಾಲಿ ಮಾಡಿರುವ ಕಾಂಗ್ರೆಸ್‌ನಲ್ಲಿ ಸಾಕಷ್ಟು ಹಗರಣಗಳಿವೆ ಎಂದು ದೂರಿದರು.
ಅದರಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿ ಬಿಜೆಪಿ ಅವಿರತ ಹೋರಾಟ ಕೈಗೆತ್ತಿಕೊಂಡಿದ್ದಕ್ಕೆ ಪ್ರತಿಫಲ ಸಿಕ್ಕಿದೆ. ರಾಜ್ಯಪಾಲರ ವಿರುದ್ಧವೇ ಟೀಕೆಗೆ ಇಳಿದಿದ್ದ ಸಿದ್ದರಾಮಯ್ಯ ಕೊನೆಯವರೆಗೂ ತಮ್ಮ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದರು. ರಾಜ್ಯಪಾಲರಿಗೆ ಅಧಿಕಾರವೇ ಇಲ್ಲ ಎನ್ನುವ ಅಹಂಕಾರದ ಮಾತು ಸಿದ್ದರಾಮಯ್ಯ ಆಡಿದ್ದರು. ಇದೀಗ ಸಿದ್ದರಾಮಯ್ಯ ಅಹಂಕಾರಕ್ಕೆ ನ್ಯಾಯಾಲಯ ತೀರ್ಪು ತಕ್ಕಪಾಠ ಕಲಿಸಿದೆ. ತಕ್ಷಣ ಸಿದ್ದರಾಮಯ್ಯ ರಾಜೀನಾಮೆ ನೀಡಿ ನ್ಯಾಯದ ತೀರ್ಪಿಗೆ ತಲೆಬಾಗಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕಾಂಗ್ರೆಸ್‌ನ ಮುಖವಾಡ ಕಳಚಿ ಬಿದ್ದಿದೆ. ಸುಮಾರು 4 ಸಾವಿರ ಕೋಟಿ ರೂ. ಮುಡಾ ಹಗರಣದ ಪ್ರಮುಖ ರೂವಾರಿ ಸಿದ್ದರಾಮಯ್ಯ. ತಕ್ಷಣ ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ರಾಜೀನಾಮೆ ನೀಡಿ ನ್ಯಾಯ ಸಮ್ಮತ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಡಾ. ರಾಜನಂದಿನಿ ಕಾಗೋಡು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಲ್ಲಿಯವರೆಗೂ ನಮ್ಮ ಪಕ್ಷ ನಿರಂತರವಾಗಿ ಪ್ರತಿಭಟನೆ ನಡೆಸುತ್ತದೆ ಎಂದರು.
ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ ಪ್ರಸಾದ್, ಮೈತ್ರಿ ಪಾಟೀಲ್, ಮಾಲತೇಶ್, ಕೆ.ಎಸ್.ಪ್ರಶಾಂತ್, ಶ್ರೀರಾಮ್, ಸಂತೋಷ್ ಶೇಟ್, ಸತೀಶ್, ಕೃಷ್ಣ ಶೇಟ್, ಪರಶುರಾಮ್, ಶ್ರೀನಿವಾಸ್ ಮೇಸ್ತ್ರಿ, ಗಿರಿಗೌಡ, ಕೆ.ವಿ.ಪ್ರವೀಣ್ ಇತರರಿದ್ದರು.