

ಮೈಸೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳನ್ನು ಮುಂದಿಟ್ಟುಕೊಂಡು ಇತರರು ರಕ್ಷಣೆ ಪಡೆದುಕೊಳ್ಳುತ್ತಿದ್ದಾರೆ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ 14 ಸೈಟುಗಳು ಮಾತ್ರ ಮುನ್ನೆಲೆಗೆ ಬಂದಿದೆ. 2018ರಿಂದ ವಿತರಣೆಯಾದ 4879 ಸೈಟುಗಳ ಕುರಿತು ಸಮಗ್ರ ತನಿಖೆಯಾಗಬೇಕು. ಮುಡಾ ಸಾಮಾನ್ಯ ಸಭೆ ಗಮನಕ್ಕೆ ತರದೆ ಒಂದೇ ದಿನದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಹಿಂದಿರುಗಿಸಿದ ಸೈಟುಗಳ ಖಾತೆ ರದ್ದು ಮಾಡಲಾಗಿದೆ. ಈ ಕುರಿತು ಕಾನೂನಾತ್ಮಕವಾಗಿ ಚಿಂತಿಸಲಾಗುವುದು ಎಂದರು.
ಮುಡಾ ಪ್ರಕರಣದಲ್ಲಿ ಈವರೆಗೆ ಯಾವೊಬ್ಬ ಅಧಿಕಾರಿಯನ್ನು ಅಮಾನತು ಮಾಡಲಾಗಿಲ್ಲ. ಸರ್ಕಾರ ಯಾಕೆ ರಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ. ಸರ್ಕಾರ ಎಲ್ಲ ಹಂತದಲ್ಲೂ ಎಡವಿದೆ. ಮೊದಲಿಗೆ ನಾವು ತಪ್ಪು ಮಾಡೇ ಇಲ್ಲ ಎಂದು ವಾದಿಸಿಕೊಂಡು ಬಂದರು. ಈಗ ತಪ್ಪು ಮಾಡದಿದ್ದ ಮೇಲೆ ಯಾಕೆ ಸೈಟು ಹಿಂದಿರುಗಿಸಿದ್ದಾರೆ ಎಂದು ಪ್ರಶ್ನಿಸಿದರು.
ಅಕ್ರಮ ಸೈಟು ಹಂಚಿಕೆ ವಿಚಾರವಾಗಿ ನಿಷ್ಪಕ್ಷಪಾತವಾಗಿ ಎಲ್ಲ ಪಕ್ಷದವರ ಕುರಿತು ತನಿಖೆಯಾಗಲಿ, ಈ ಮೂಲಕವಾದರೂ ಮೈಸೂರು ಸ್ವಚ್ಛವಾಗಲಿ, ಬಡವರಿಗೆ, ನೈಜ ಫಲಾನುಭವಿಗಳಿಗೆ ಸೈಟ್‌ಗಳು ದೊರಕುವಂತಾಗಲಿ ಎಂದರು.
ದಸರಾ ವೇದಿಕೆಯಲ್ಲಿ ರಾಜಕೀಯ: ದಸರಾ ವೇದಿಕೆಯಲ್ಲಿ ರಾಜಕೀಯ ಹೇಗೆ ಸೇರಿಕೊಂಡಿತು ಎಂಬುದು ತಿಳಿದಿಲ್ಲ. ದಸರಾ ಉದ್ಘಾಟಕರಾದಿಯಾಗಿ ಮುಖ್ಯಮಂತ್ರಿ, ಇತರರು ರಾಜಕೀಯ ಮಾತನಾಡಿದ್ದಾರೆ. ಜಿ.ಟಿ. ದೇವೇಗೌಡರು ಹಿರಿಯರು. ಅವರ ಕುರಿತು ನಾನು ಮಾತನಾಡುವುದಿಲ್ಲ. ಈ ಬಗ್ಗೆ ಪಕ್ಷದ ಹಿರಿಯರು ಮಾತುಕತೆ ನಡೆಸಲಿದ್ದಾರೆ ಎಂದರು.