ಬಸವರಾಜ ಬೊಮ್ಮಾಯಿ ಮೊದಲು ತಮ್ಮ ಟಿಕೆಟ್ ಪಡೆಯಲಿ

congress ticket aspirants joints press meet
Published on

ಹಾವೇರಿ: ‘ಕುಸ್ತಿ ಆಡೋಕೆ ಬರ‌್ರಿ…’ ಎಂದು ಸವಾಲು ಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಮೊದಲು ಟಿಕೆಟ್ ತೆಗೆದುಕೊಂಡು ಬರಲಿ. ಆಮೇಲೆ ಅವರನ್ನು ಸೋಲಿಸಿ ಮನೆಗೆ ಕಳುಹಿಸುತ್ತೇವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸೋಮಣ್ಣ ಬೇವಿನಮರದ ತಿರುಗೇಟು ನೀಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಟಿಕೆಟ್ ಯಾರಿಗೆ ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ಬಿ.ವೈ. ವಿಜಯೇಂದ್ರ ಹೆಸರೂ ಹೈಕಮಾಂಡ್‌ಗೆ ಹೋಗಿದೆ. ತಮ್ಮ ಪರಿಸ್ಥಿತಿ ಹೀಗಿರುವಾಗ ಸಿಎಂ ಕಾಂಗ್ರೆಸ್ ಪಕ್ಷಕ್ಕೆ ಹೇಗೆ ಸವಾಲು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಅವರಿಗೆ ಯಾವ ವಿಷಯವನ್ನು ಎಲ್ಲಿ ಮಾತನಾಡಬೇಕು ಎಂಬ ಸಾಮಾನ್ಯ ಜ್ಞಾನ ಇರಬೇಕು. ಕಣದೊಳಗೆ ಅವರದ್ದೇ ಗ್ಯಾರಂಟಿ ಇಲ್ಲ. ನಮ್ಮದು (ಕಾಂಗ್ರೆಸ್) ಈಗಾಗಲೇ ಎರಡು ಪಟ್ಟಿ ಬಿಡುಗಡೆಯಾಗಿದೆ. ಅವರದ್ದು (ಬಿಜೆಪಿ)ಒಂದೂ ಬಿಡುಗಡೆಯಾಗಿಲ್ಲ ಎಂದು ಟೀಕಿಸಿದರು.

ಸಿಎಂಗೆ ತಾಕತ್ತಿದ್ದರೆ ಸವಣೂರಿನ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಬರೆದ ಪತ್ರಕ್ಕೆ ಉತ್ತರಿಸಲಿ. ರಸ್ತೆಗಳು ಹಾಳಾಗಿದ್ದರಿಂದ ಸರ್ಕಾರಿ ಬಸ್ ಬಿಡುವುದಿಲ್ಲ ಎಂದು ಪತ್ರ ಬರೆದಿದ್ದರು. ಶಿಗ್ಗಾಂವಿ, ಹುಲಗೂರಲ್ಲಿ ಗೋಲಿಬಾರ್ ಆಗಿತ್ತು. ಶಿಗ್ಗಾಂವಿಯಲ್ಲಿ ಹಾಡಹಗಲೇ ದರೋಡೆ ನಡೆದಿತ್ತು. ಇದಕ್ಕೆಲ್ಲ ಸಿಎಂ ಉತ್ತರಿಸಲಿ ಎಂದು ಸವಾಲು ಹಾಕಿದರು.

ಸಿಎಂ ಬೊಮ್ಮಾಯಿ ಕಾಗದದ ಹುಲಿ. ಸರ್ಕಾರಿ ಎಂಎಸ್‌ಐಎಲ್ ಅಂಗಡಿಗೆ ಹೋಗಿ ಬಂದವರಂತೆ ಅವರು ಮಾತನಾಡಿದ್ದಾರೆ. ರಾಜಕೀಯದಲ್ಲಿ ಪಕ್ಷಾಂತರ ಸಾಮಾನ್ಯ. 2008ರಲ್ಲಿ ಬೊಮ್ಮಾಯಿ ಅವರು ಎಚ್.ಕೆ. ಪಾಟೀಲರ ಮನೆ ಬಾಗಿಲು ತಟ್ಟಿ ಬಂದಿದ್ದು ಗೊತ್ತಿದೆ. ಸಿಎಂ ವಿರುದ್ಧ ಈಗ 14 ಆಕಾಂಕ್ಷಿಗಳು ಒಟ್ಟಾಗಿದ್ದೇವೆ. ಯಾರಿಗೇ ಟಿಕೆಟ್ ಕೊಟ್ಟರೂ ಸಿಎಂ ಬೊಮ್ಮಾಯಿ ಅವರನ್ನು ಸೋಲಿಸುತ್ತೇವೆ ಎಂದರು.

ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಸೆಡ್ಡು ಹೊಡೆದು ನಿಲ್ಲುತ್ತೇನೆ ಎಂದು ಸಿಎಂ ಸೋಲಿನ ಭೀತಿಯಿಂದ ಹತಾಶರಾಗಿ ನುಡಿದಿದ್ದಾರೆ. ಅವರು ಹಿಂಬಾಗಿಲಿನಿಂದ ಸಿಎಂ ಆದವರು. ಹುಬ್ಬಳ್ಳಿಯಲ್ಲಿ ಜಗದೀಶ ಶೆಟ್ಟರ್ ವಿರುದ್ಧ ಸೋತು ಬೆಂಗಳೂರು ಸುತ್ತಿ ಬಂದು ಶಿಗ್ಗಾಂವಿಯ ಮುಗ್ಧ ಜನರ ದಾರಿ ತಪ್ಪಿಸಿ, ಒಳ ಒಪ್ಪಂದ ಮಾಡಿಕೊಂಡು ಶಾಸಕರಾದವರು. ಅಭಿವೃದ್ಧಿ ಹರಿಕಾರ ಎನ್ನುತ್ತ ಅವರು ಮಾತ್ರ ಅಭಿವೃದ್ಧಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ವೀರಶೈವ ಸಮಾಜದ ಬೆಂಬಲದಿಂದ ಗೆದ್ದು ಬಂದು ಸಿಎಂ ಆಗಿ ಇಂತಹ ಮಾತುಗಳನ್ನಾಡುವ ಮೂಲಕ ಸಮಾಜಕ್ಕೆ ಅವರು ಅಗೌರವ ತೋರಿದ್ದಾರೆ. ಒಂದೇ ಒಂದು ದಿನ ಕ್ಷೇತ್ರದಲ್ಲಿ ವಾಸವಿಲ್ಲದ ಜನಪ್ರತಿನಿಧಿ ಅವರು. ನಾವು ಅವರ ಸವಾಲು ಸ್ವೀಕರಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಶಿಧರ ಯಲಿಗಾರ, ಷಣ್ಮುಖ ಶಿವಳ್ಳಿ, ರಾಜೇಶ್ವರಿ ಪಾಟೀಲ, ಸಂಜೀವ ನೀರಲಗಿ, ಯಾಸೀರ್‌ಖಾನ್ ಪಠಾಣ, ಶಿಗ್ಗಾಂವಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಶಂಭು ಆಜೂರ, ಸವಣೂರ ತಾಲೂಕು ಅಧ್ಯಕ್ಷ ಎಂ.ಜಿ. ಮುಲ್ಲಾ, ಎಸ್.ವಿ. ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net