

* ರೋಗಿಗಳಿಗೆ ವರವಾದ ಸರ್ಕಾರದ ಆದೇಶ
* ಕಿದ್ವಾಯಿ ಮೇಲಿನ ಒತ್ತಡ ಕಡಿಮೆ ಮಾಡಲು ಕ್ರಮ
ಗಂಗಾಧರ್ ಬೈರಾಪಟ್ಟಣ ರಾಮನಗರ ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿ ನೀಡಿರುವ ಸರ್ಕಾರ ಈಗ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಕೀಮೋ ಥೆರಪಿ ದೊರೆಯುವಂತೆ ಮಾಡಿದೆ. ಸಾಮಾನ್ಯವಾಗಿ ಕ್ಯಾನ್ಸರ್ ಪೀಡಿತರು ಕೀಮೋ ಥೆರಪಿಗಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಮೇಲೆಯೇ ಅವಲಂಬಿತವಾಗಬೇಕಿತ್ತು. ಈಗ ಇದಕ್ಕೆ ಮುಕ್ತಿ ನೀಡಿರುವ ಸರ್ಕಾರ ಜಿಲ್ಲಾ ಕೇಂದ್ರದಲ್ಲಿಯೇ ಥೆರಪಿ ಪಡೆಯಲು ಅನುಕೂಲವಾಗುವಂತೆ ಜಿಲ್ಲಾಸ್ಪತ್ರೆಗಳಲ್ಲಿ ಒಂದೊಂದು ಡೇ ಕೇರ್ ಟಕ ಆರಂಭಿಸಿ, ಖಾಸಗಿ ಆಸ್ಪತ್ರೆಗಳೊಂದಿಗೆ ಒಂಡಂಬಡಿಕೆ ಮಾಡಿಕೊಂಡು ಥೆರಪಿ ನೀಡಲಿವೆ.
ಮೊದಲು ರೋಗ ಲಕ್ಷಣ ಕಂಡ ತಕ್ಷಣ ರೋಗಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಕಳುಹಿಸಲಾಗುತಿತ್ತು. ಅಲ್ಲಿ ಹಲವು ಪರೀಕ್ಷೆ ನಡೆಸಿ ಯಾವ ಮಾದರಿಯ ಕ್ಯಾನ್ಸರ್ ಹಾಗೂ ಎಷ್ಟನೇ ಹಂತದಲ್ಲಿ ಎನ್ನುವುದನ್ನು ಪತ್ತೆ ಹಚ್ಚಿ, ಚಿಕಿತ್ಸೆ ನೀಡಲಾಗುತ್ತಿತ್ತು. ಕೀಮೋ ಥೆರಪಿ ಅಗತ್ಯ ಇರುವವರಿಗೆ ಒಟ್ಟು 21 ಬಾರಿ ಥೆರಪಿ ನೀಡಲಾಗುತ್ತಿದೆ. ಇದರದ್ದೇ ಆದ ಮಾನದಂಡದ ಆಧಾರದ ಮೇಲೆ ಥೆರಪಿ ನೀಡಲಾಗುತಿತ್ತು. ದೂರದ ಊರಿನಿಂದ ಬರುವ ಬಡವರಿಂದ ಧನಿಕರವರೆಗೆ ಎಲ್ಲರೂ ಬೆಂಗಳೂರಿನಲ್ಲಿಯೇ ಉಳಿದು, ಇಲ್ಲವೇ ರೋಗಿಯನ್ನು ದೂರದ ಊರಿನಿಂದಲೇ ಪ್ರತಿ ಬಾರಿ ಬೆಂಗಳೂರಿಗೆ ಕರೆತಂದು ಥೆರಪಿ ಕೊಡಿಸಬೇಕಿತ್ತು. ಇದರ ಜತೆಗೆ ರಾಜ್ಯಾದ್ಯಂತ ಬರುವ ರೋಗಿಗಳ ಸಂಖ್ಯೆ ಹೆಚ್ಚಳವಾದ ಕಾರಣ, ಸಾಮಾನ್ಯವಾಗಿ ಕಿದ್ವಾಯಿ ಆಸ್ಪತ್ರೆ ಮೇಲೂ ಕಾರ್ಯದೊತ್ತಡ ಹೆಚ್ಚಾಗಿತ್ತು. ಇದನ್ನು ತಡೆಯುವ ನಿಟ್ಟಿನಲ್ಲಿಯೇ ಈಗ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಥೆರಪಿ ಟಕ ಆರಂಭಿಸಲಾಗಿದೆ.
ರೋಗ ಲಕ್ಷಣ ಪತ್ತೆಯಾದ ಹಾಗೂ ಪತ್ತೆಗಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇಲ್ಲಿ ರೋಗಿಗೆ ಕ್ಯಾನ್ಸರ್ ಇರುವುದು ದೃಢಪಟ್ಟರೆ, ಆರಂಭಿಕ ಚಿಕಿತ್ಸೆ ಇಲ್ಲಿಯೇ ದೊರೆಯುತ್ತದೆ. ನಂತರ ಕೀಮೋ ಆಗತ್ಯವಿದ್ದರೆ, 21 ಕೀಮೋಗಳಲ್ಲಿ ಮೊದಲ ಥೆರಪಿ ಕಿದ್ವಾಯಿಯಲ್ಲಿಯೇ ಆಗಲಿದೆ. ಉಳಿದ 20 ಥೆರಪಿಗಳು ಆಯಾ ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿಯೇ ದೊರೆಯುತ್ತದೆ. ರೋಗಿ ಯಾವ ಜಿಲ್ಲೆಗೆ ಒಳಪಟ್ಟಿರುತ್ತಾರೋ ಅದೇ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ರೋಗಿಗೆ ಥೆರಪಿ ದೊರೆಯಲಿದೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು, ನಂತರ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಜಿಲ್ಲಾ ಕೇಂದ್ರಗಳ ಟಕಗಳಿಗೆ ಉದ್ಘಾಟಿಸಿದ್ದರು.
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಬೇಕಾದರೆ ದೂರದ ಊರಿನಿಂದ ಬರುವ ರೋಗಿಗಳ ಪಾಲಿಗೆ ವೆಚ್ಚ ಹೆಚ್ಚಾಗಿತ್ತು. ಥೆರಪಿ ರೋಗಿಗಳನ್ನು ಒಂದಿಷ್ಟು ಬಳಲಿಸುತ್ತೆ. ಇದರ ಜತೆಗೆ ಪ್ರಯಾಣ ಮತ್ತಷ್ಟು ನೋವು ತರುತಿತ್ತು. ಆದರೆ, ಈಗ ಅವರದೇ ಜಿಲ್ಲೆಯಲ್ಲಿ ಥೆರಪಿ ದೊರೆಯುವ ಕಾರಣ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ. ಥೆರಪಿ ಇರುವ ದಿನದಂದು ಬರುವ ರೋಗಿಗೆ ಡೇ ಕೇರ್ ಥೆರಪಿ ಕೇಂದ್ರದಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡಿದ ನಂತರ ಒಂದಿಷ್ಟು ಕಾಲ ವಿಶ್ರಾಂತಿ ಪಡೆದು ಸಂಜೆ ವೇಳೆಗೆ ಮನೆ ಸೇರಿಕೊಳ್ಳಬಹುದು ಎನ್ನುತ್ತಾರೆ ಜಿಲ್ಲಾಸ್ಪತ್ರೆಯ ಶಸ ಚಿಕಿತ್ಸಕ ಡಾ. ಮಂಜುನಾಥ್.
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಈಗ 10 ಬೆಡ್ನ ಕೀಮೋ ಥೆರಪಿ ಡೇ ಕೇರ್ ಕೇಂದ್ರ ಆರಂಭಿಸಲಾಗಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಸಂಜೀವಿನಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಈವರೆವಿಗೂ ಜಿಲ್ಲೆಗೆ ಓರ್ವ ರೋಗಿಯನ್ನು ಶಿಫಾರಸು ಮಾಡಿಲ್ಲ. ಇದಕ್ಕೆ ಬೇಕಾದ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿ, ಅವರಿಗೆ ತರಬೇತಿ ನೀಡಲಾಗಿದೆ.
ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಲ್ಲಿಯೂ ಕೀಮೋ ಥೆರಪಿ ಡೇ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದ್ದು, ನಮ್ಮ ಜಿಲ್ಲೆಯಲ್ಲಿಯೂ ಆರಂಭಗೊಂಡಿದೆ. ಆಯಾ ಜಿಲ್ಲೆಯ ರೋಗಿಗಳಿಗೆ ಮಾತ್ರವಷ್ಟೇ ಇಲ್ಲಿ ಕಿಮೋ ಥೆರಪಿ ಮಾಡಲಾಗುತ್ತದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಆಗಿದೆ. > ಡಾ.ಮಂಜುನಾಥ್, ಜಿಲ್ಲಾ ಶಸ ಚಿಕಿತ್ಸಕ, ಜಿಲ್ಲಾಸ್ಪತ್ರೆ, ರಾಮನಗರ