

ಚೇಳೂರು: ಗಡಿ ಪ್ರದೇಶದಲ್ಲಿರುವ ಚೇಳೂರು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದರಿಂದ ತಾಲೂಕನ್ನು ಪ್ರಗತಿಯತ್ತ ಕೊಂಡೊಯ್ಯುವ ಉದ್ದೇಶದಿಂದಲೇ ಇಲ್ಲಿಗೆ ಆಗಮಿಸಿದ್ದೇನೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ತಾಲೂಕಿನ ಚಾಕವೇಲು ಗ್ರಾಮದಲ್ಲಿ ‘ಎಂಪಿ ನಡೆ ಹಳ್ಳಿ ಕಡೆ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ತಾಲೂಕು ಆಂಧ್ರ ಗಡಿಯಲ್ಲಿರುವುದರಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹಾಗಾಗಿ ಮುಖಂಡರ ಜತೆ ಚರ್ಚೆ ನಡೆಸಿ, ಪ್ರತಿ ಗ್ರಾಮಕ್ಕೂ 50 ಲಕ್ಷ ರೂ. ಅನುದಾನ ತರಬಹುದಾದ್ದರಿಂದ ಯಾವ ಗ್ರಾಮಕ್ಕೆ ಅಭಿವೃದ್ಧಿ ಅವಶ್ಯಕ ಎಂಬುದನ್ನು ಅರಿತು ಆ ಗ್ರಾಮವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಬೆಂಗಳೂರಿನಿಂದ ಚಾಕವೇಲು ಗ್ರಾಮಕ್ಕೆ ಬರಬೇಕಾದರೆ 3 ಗಂಟೆ ಪ್ರಯಾಣ ಮಾಡಬೇಕು. ಹಾಗೆಯೇ ನಮ್ಮ ಊರು ಪೆರೇಸಂದ್ರದಿಂದ ಚಾಕವೇಲುಗೆ ಬರಬೇಕಾದರೆ 1.30 ಗಂಟೆ ಪ್ರಯಾಣ ಮಾಡಬೇಕು. ಆದ್ದರಿಂದಲೇ ಯಾರೊಬ್ಬರೂ ಇಷ್ಟು ದೂರ ಬಂದು ಅಭಿವೃದ್ಧಿ ಮಾಡಲು ಆಸಕ್ತಿ ವಹಿಸಿಲ್ಲ ಎಂದರು.
ಬಾಗೇಪಲ್ಲಿ ಕ್ಷೇತ್ರದಿಂದ ಚೇಳೂರು ಅಭಿವೃದ್ಧಿ ಕಾಮಗಾರಿಗೆ ಅನೇಕ ಅನುದಾನ ಬಿಡುಗಡೆಯಾದರೂ ಚೇಳೂರು ಬಹಳ ಹಿಂದುಳಿದಿದೆ ಎಂದು ನಂಜುಂಡಪ್ಪ ವರದಿಯಲ್ಲೂ ಉಲ್ಲೇಖಗೊಂಡಿದೆ ಎಂದರು.
ಅಧಿಕಾರಿಗಳೊಂದಿಗೆ ಚರ್ಚೆ: ಚೇಳೂರು ತಾಲೂಕಿನಲ್ಲಿ ರಸ್ತೆಗಳು ಮಾತ್ರವಲ್ಲದೆ, ಸರಿಯಾದ ಆಸ್ಪತ್ರೆ, ಶಾಲೆಗಳು, ಹಳ್ಳಿಗಳಲ್ಲಿ ಸರಿಯಾದ ಶೌಚಗೃಹ ಇಲ್ಲ. ಈ ಕಾರ್ಯಕ್ರಮದ ಮೂಲಕ ಜನರಿಗೆ ಏನು ಬೇಕು ಎಂಬುದನ್ನು ಪಟ್ಟಿಮಾಡಿ, ಕೇಂದ್ರ ಹಾಗೂ ರಾಜ್ಯದ ಎಲ್ಲ ಅಧಿಕಾರಿಗಳ ಜತೆ ಚರ್ಚಿಸಿ, ರಸ್ತೆ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿ ಬಗ್ಗೆ ಮಾಹಿತಿ ಪಡೆದು ಪ್ರಗತಿಯತ್ತ ಕೊಂಡೊಯ್ಯಲು ಪ್ರಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸುಧಾಕರ್ ತಿಳಿಸಿದರು. ಜಿಪಂ ಮಾಜಿ ಸದಸ್ಯ ಹರಿನಾಥರೆಡ್ಡಿ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಟಿ.ಕೋನಪ್ಪರೆಡ್ಡಿ, ತಾಪಂ ಮಾಜಿ ಉಪಾಧ್ಯಕ್ಷ ಜಿ.ವಿ.ಕೃಷ್ಣಾರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ಹಾಲು ಸಂಘದ ಅಧ್ಯಕ್ಷ ಸೋಮಶೇಖರರೆಡ್ಡಿ, ಸೊಸೈಟಿ ಅಧ್ಯಕ್ಷ ಜಿ.ಪಿ.ರೆಡ್ಡಿ, ಜೆಡಿಎಸ್ ಅಧ್ಯಕ್ಷ ಲಕ್ಷ್ಮೀನಾರಾಯಣ,
ತಾಪಂ ಮಾಜಿ ಸದಸ್ಯ ಎಸ್.ವೈ.ವೆಂಕಟರಮಣ ರೆಡ್ಡಿ, ಜಿ.ಎಸ್.ಸುಧಾಕರರೆಡ್ಡಿ, ಗ್ರಾಪಂ ಉಪಾಧ್ಯಕ್ಷೆ ಪ್ರಭಾವತಿ ಬಾಲಕೃಷ್ಣ ಇದ್ದರು.
ಕೇಂದ್ರ ಯೋಜನೆ ಅರ್ಥೈಸಿಕೊಳ್ಳಿ
ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಪ್ರತಿಯೊಬ್ಬ ಭಾರತೀಯರಿಗೂ ಅನೇಕ ಅನುಕೂಲ ಮಾಡಿಕೊಟ್ಟಿದ್ದಾರೆ. ಸ್ವಚ್ಛ ಭಾರತ್ ಮಿಷನ್, ಜಲಜೀವನ್ ಮಿಷನ್‌ನಂತಹ ವಿನೂತನ ಯೋಜನೆ ನೀಡಿದ್ದಾರೆ. ಬಾಗೇಪಲ್ಲಿಯಲ್ಲಿ ಮಾತ್ರ ಶಾಸಕರು ತಾನೇ ನೀಡಿರುವಂತೆ ಭೂಮಿ ಪೂಜೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದ ಸಂಸದರು, ಪ್ರಧಾನ ಮಂತ್ರಿ ಜನೌಷಧ, ಆಯುಷ್ಮಾನ್ ಭಾರತ್ ಕಾರ್ಡ್ ಸದ್ಬಳಕೆ ಮಾಡಿಕೊಳ್ಳಬೇಕು. ಕುಟುಂಬದ ಒಬ್ಬ ವ್ಯಕ್ತಿ ಅನಾರೋಗ್ಯಕ್ಕೀಡಾದರೆ ವರ್ಷಕ್ಕೆ 5 ಲಕ್ಷ ರೂ. ವೆಚ್ಚದ ಚಿಕಿತ್ಸೆ ಲಭಿಸಲಿದೆ ಎಂದರು.
ಗ್ರಾಮಸ್ಥರ ಕುಂದು ಕೊರತೆ
ಚಾಕವೇಲು ಗ್ರಾಪಂ ವ್ಯಾಪ್ತಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸಂಸದರು ಭೇಟಿ ನೀಡಿ, ದೇವರ ದರ್ಶಣ ಪಡೆದರು. ಕೊಂಡಮವಾರಪಲಿ, ವೆಂಕಟರೆಡ್ಡಿಪಲ್ಲಿ, ತಾಂಡ, ಮದ್ದಿರೆಡ್ಡಿಪಲ್ಲಿ, ವೆಂಕಟೇಶಪಲ್ಲಿ, ಬುದ್ದಲವಾರಪಲ್ಲಿ, ಆದಿರೆಡ್ಡಿಪಲ್ಲಿ, ವಡ್ಡಿವಾಂಡ್ಲಪಲ್ಲಿ, ಯಗವಪ್ಯಾಯಿಲವಾಂಡ್ಲಪಲ್ಲಿ, ದಿಗವಪ್ಯಾಯಿಲವಾಂಡ್ಲಪಲ್ಲಿ, ಕೊತ್ತೂರ‌್ಲು ಹಾಗು ಪಾಪಿರೆಡ್ಡಿಪಲ್ಲ್ಲಿಯಲ್ಲಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸ್ಥಳೀಯ ಕುಂದುಕೊರತೆಗಳನ್ನು ಆಲಿಸಿದರು. ದಾಸಿರಿವಾಂಡ್ಲಪಲ್ಲಿಯಲ್ಲಿ ಮನೆ ಮನೆಗೆ ಕುಡಿಯುವ ನೀರಿನ ಪೂರೈಕೆಯ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯ ವೀಕ್ಷಿಸಿದರು. ಅಂಗನವಾಡಿ ಉಪಕೇಂದ್ರ ಸ್ಥಾಪನೆಯ ಭರವಸೆ ನೀಡಿದರು.
ಕೇಂದ್ರದಿಂದ ಪಡಿತರ ವಿತರಣೆ
ಇಂದಿಗೂ ರಾಜ್ಯದ ಜನರಿಗೆ ಅಕ್ಕಿ ದೊರೆಯುತ್ತಿದೆ ಎಂದರೆ ಅದು ಕೇಂದ್ರ ಸರ್ಕಾರ ಕೊಡುತ್ತಿರುವುದು. ಆದರೆ, ಸಿದ್ದರಾಮಯ್ಯ ಮಾತ್ರ ಅನ್ನಭಾಗ್ಯ ನಮ್ಮದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ರೈತರಿಗೆ ಮಳೆಯಿಂದ ನಷ್ಟವಾದರೆ, ಸರಿಯಾದ ಸಮಯಕ್ಕೆ ಬೆಳೆ ಬರದಿದ್ದರೆ ಫಸಲ್ ಬಿಮಾ ಯೋಜನೆಯಡಿ ರೈತರಿಗೆ 1.50 ಕೋಟಿ ರೂ.ಡಿಪಿಟಿ ಮೂಲಕ ಬಂದಿದೆ. ಯಾವುದೇ ಬೆಳೆ ಇಟ್ಟಾಗ ಅದಕ್ಕೆ ವಿಮೆ ಮಾಡಬಹುದು. ಇದು ನರೇಂದ್ರ ಮೋದಿ ಸರ್ಕಾರದ ಕೊಡುಗೆ ಎಂದು ಅರಿಯಬೇಕು ಎಂದು ಸಂಸದರು ತಿಳಿಸಿದರು. ಕ್ಷೇತ್ರದ ಜನರಿಗೆ ಯಾವುದೇ ಸಮಸ್ಯೆ ಎದುರಾದರೂ ನಮ್ಮ ಮುಖಂಡರಿಗೆ ಅಥವಾ ನಮ್ಮ ಸಹಾಯಕರಿಗೆ ನೇರವಾಗಿ ಮಾತನಾಡಿ. ಶನಿವಾರ ಮತ್ತು ಭಾನುವಾರ ನಾನು ಜನರ ಮಧ್ಯೆ ಇರುತ್ತೇನೆ. ನಿಮ್ಮಿಂದ ನಾನು ಇಂದು ಕೇಂದ್ರದಲ್ಲಿ ಸಂಸದನಾಗಿದ್ದೇನೆ. ಆ ಋಣವನ್ನು ತೀರಿಸಲು ನಿಮ್ಮ ಮುಂದೆ ಬಂದಿದ್ದೇನೆ ಎಂದು ಸಂಸದರು ಕೃತಜ್ಞತಾ ಭಾವ ವ್ಯಕ್ತಪಡಿಸಿದರು. ಚೇಳೂರು ತಾಲೂಕಿನ ಚಾಕವೇಲು ಗ್ರಾಮ ಪಂಚಾಯಿತಿಯ ವಡ್ಡಿವಾಂಡ್ಲಪಲ್ಲಿ ಸಮೀಪ ಸ್ಮಶಾನ ಭೂಮಿ ಒತ್ತುವರಿ ಮಾಡಿಕೊಂಡು ತೊಂದರೆ ನೀಡುತ್ತಿರುವುದಾಗಿ ಗ್ರಾಮದ 160 ಪರಿಶಿಷ್ಟ ಸಮುದಾಯದ ಕುಟುಂಬದವರು ಸಂಸದರಿಗೆ ಅಹವಾಲು ಸಲ್ಲಿಸಿದರು. ಇದೇವೇಳೆ ಸ್ಥಳದಲ್ಲೇ ಇದ್ದ ರಾಜಸ್ವ ನೀರಿಕ್ಷಕ ಈಶ್ವರ್ ಅವರನ್ನು ಕರೆದು ಸಮಸ್ಯೆ ಶೀಘ್ರ ಬಗೆಹರಿಸಬೇಕು ಎಂದು ಸೂಚಿಸಿದರು.
"ಶಾಸಕರ 15 ವರ್ಷದ ಕೆಲಸವನ್ನು ಈ ರಸ್ತೆಗಳು ತೋರಿಸುತ್ತಿವೆ. ಇಷ್ಟು ವರ್ಷ ಶಾಸಕರ ಅಭಿವೃದ್ಧಿ ಏನೆಂದು ಈಗ ಗೊತ್ತಾಗುತ್ತಿದೆ. ಹಾಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇನೆ". - ಡಾ.ಕೆ.ಸುಧಾಕರ್, ಸಂಸದ