ಚೇಳೂರು-ಮಂಚೇನಹಳ್ಳಿಗೂ ನಿರ್ದೇಶಕ ಸ್ಥಾನ

FotoJet (2)
Published on

ಚಿಮುಲ್ ಕ್ಷೇತ್ರ ಪುನರ್‌ವಿಂಗಡಣೆಗೆ ಆನಂದ್ ಆಗ್ರಹ ಶಿಬಿರ ಕಚೇರಿಗೂ ಒತ್ತಾಯ

ಚೇಳೂರು: ನೂತನ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಚೇಳೂರು ಮತ್ತು ಮಂಚೇನಹಳ್ಳಿ ತಾಲೂಕುಗಳಿಗೆ ಪ್ರತ್ಯೇಕ ನಿರ್ದೇಶಕ ಸ್ಥಾನಗಳನ್ನು ನೀಡಬೇಕು. ಹಾಗೂ ಶಿಬಿರ ಕಚೇರಿ ಮಂಜೂರು ಮಾಡಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ದಿ ಒಕ್ಕೂಟದ ಸದಸ್ಯ ಜೆ.ಕೆ.ಆನಂದ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಚೇಳೂರು ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾತನಾಡಿ, ಜಿಲ್ಲೆಯಲ್ಲಿ ಮೊದಲು ಆರು ತಾಲೂಕುಗಳಿದ್ದು, ಮಂಚೇನಹಳ್ಳಿ, ಚೇಳೂರು ನೂತನ ತಾಲೂಕುಗಳು ಅಸ್ತಿತ್ವಕ್ಕೆ ಬಂದ ನಂತರ 8 ತಾಲೂಕುಗಳಿವೆ. ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ಪ್ರತ್ಯೇಕವಾದ ನಂತರ ಜಿಲ್ಲೆಯ 6 ತಾಲೂಕುಗಳಿಂದ 6 ನಿರ್ದೇಶಕರು ಹಾಗೂ ಓರ್ವ ಮಹಿಳಾ ನಿರ್ದೇಶಕ ಸ್ಥಾನವಿದೆ. ಹಾಲಿ ಜಿಲ್ಲೆಯಲ್ಲಿರುವ 850 ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೊಸ ತಾಲೂಕು ಸೇರಿ ಎಲ್ಲ 8 ತಾಲೂಕುಗಳಿಗೆ ಸಮಾನವಾಗಿ ಹಂಚಿಕೆ ಮಾಡಿದರೆ ಪ್ರತಿ ತಾಲೂಕಿಗೆ 100-120 ಡೇರಿಗಳನ್ನು ಹಂಚಬಹುದಾಗಿದೆ. ಆದರೆ, ಪ್ರತ್ಯೇಕ ಹಾಲು ಒಕ್ಕೂಟ ರಚನೆ ಬಳಿಕ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ರಾಜಕೀಯ ಲೆಕ್ಕಾಚಾರದ ಚರ್ಚೆ ನಡೆಯುತ್ತಿದೆ ಎಂದರು.

ಸಹಕಾರಿ ಕಾಯ್ದೆ ಅನ್ವಯ ಜಿಲ್ಲೆಯ ಪ್ರತಿ ತಾಲೂಕಿಗೆ ಒಬ್ಬರಂತೆ 8 ನಿರ್ದೇಶಕರು ಹಾಗೂ 4 ತಾಲೂಕುಗಳನ್ನು ಒಳಗೊಂಡಂತೆ ಇಬ್ಬರು ಮಹಿಳಾ ನಿರ್ದೇಶಕ ಸ್ಥಾನವನ್ನು ವಿಗಂಡಿಸಿ ಹೆಚ್ಚುವರಿ ಕ್ಷೇತ್ರ ಮಾಡಿದ್ದಲ್ಲಿ ಆರ್ಥಿಕ ಹೊರೆಯಾಗಲಿದೆ.

ಚೇಳೂರು, ಮಂಚೇನಹಳ್ಳಿ ತಾಲೂಕುಗಳಿಗೂ ನಿರ್ದೇಶಕ ಸ್ಥಾನ ಮೀಸಲಿಡಲಾಗುತ್ತಿದೆ ಎಂಬುದು ತಿಳಿದು ಬಂದಿದ್ದರಿಂದ ಈ ತಾಲೂಕುಗಳಿಗೂ ನಿರ್ದೇಶಕರನ್ನು ಆಯ್ಕೆ ಮಾಡಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ಹಾಲಿನ ಡೇರಿಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ಸಹಕಾರ ನೀಡಬೇಕು ಎಂದು ಜೆ.ಕೆ. ಆನಂದ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net