

ಗುಬ್ಬಿ: ತಾಲೂಕಿನ ಸಿ.ಎಸ್.ಪುರ ಬಳಿಯ ವಿ.ಕೋಡಿಹಳ್ಳಿಯಲ್ಲಿ ಮೂವರ ಮೇಲೆರಗಿ ಗಾಯಗೊಳಿಸಿದ್ದ ಚಿರತೆ ಬಲೆಗೆ ಬಿದ್ದಿದೆ. ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಕೆರೆ ಬಾರೆ ತೋಟದ ಸಾಲಿನಲ್ಲಿ ಕಾಣಿಸಿಕೊಂಡ ಚಿರತೆಯು ಸ್ಥಳಿಯ ರೈತರ ಮೇಲೆರಗಿ ಗಾಯಗೊಳಿಸಿತ್ತು. ಗ್ರಾಮದ ಬಳಿ ಬುಧವಾರ ಪ್ರತ್ಯಕ್ಷ$ವಾದ ಚಿರತೆ ಪ್ರಾಣಹಾನಿ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಲ್ಲುದೊಣ್ಣೆ ಹಿಡಿದು ಗಾಬರಿ ಮಾಡಿ ಓಡಿಸಲು ಮುಂದಾಗಿದ್ದು ಈ ವೇಳೆ ವ್ಯ್ರಾಗೊಂಡ ಚಿರತೆಯು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮೂವರು ಗಾಯಗೊಂಡಿದ್ದರು.
ಜಂಟಿ ಕಾರ್ಯಾಚರಣೆ: ಚಿರತೆ ಉಪಟಳ ಬಗ್ಗೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಚಿರತೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ, ಸಿ.ಎಸ್.ಪುರ ಪೊಲೀಸರ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು8 ವರ್ಷದ ಚಿರತೆಯನ್ನು ಬಲೆ ಬೀಸಿ ಹಿಡಿದಿದ್ದಾರೆ. ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ನೇತೃತ್ವದ ತಂಡ 24 ಗಂಟೆಯಲ್ಲಿ ಚಿರತೆ ಸೆರೆಹಿಡಿದ್ದು ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.